ಕುರ್ಚಿ ಕದನ ನಡುವಲ್ಲೇ ಸಿದ್ದುಗೆ ಟಕ್ಕರ್; ಡಿಕೆಶಿ ಭೇಟಿಯಾದ ಅತಿ ಹಿಂದುಳಿದ ಸ್ವಾಮೀಜಿಗಳ ಒಕ್ಕೂಟ; ಸಮಾವೇಶ ನಡೆಸುವಂತೆ ಒತ್ತಾಯ
ಡಿಕೆ.ಶಿವಕುಮಾರ್ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಣವಾನಂದ ಸ್ವಾಮೀಜಿ. ರಾಜ್ಯದ ಮುಖ್ಯಮಂತ್ರಿ ಆಗಲು ಡಿಕೆಶಿ ಯೋಗ್ಯ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ತಡಮಾಡಬಾರದು.

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಅಹಿಂದ, ಹಿಂದುಳಿದ ವರ್ಗಗಳ ನಾಯಕ ಅಂದರೆ ಅದು ಸಿದ್ದರಾಮಯ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈಗ ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು ಅತಿ ಹಿಂದುಳಿದ ವರ್ಗಗಳ ಒಕ್ಕೂಟ ಮುಂದಾಗಿದ್ದು, ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ನಡೆಸಲು ಮುಂದಾಗಿವೆ ಎಂದು ತಿಳಿದುಬಂದಿದೆ.
ಅತಿ ಹಿಂದುಳಿದ ವರ್ಗಗಳ 11 ಸ್ವಾಮೀಜಿಗಳ ಒಕ್ಕೂಟ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿದ್ದು, ಬೆಂಗಳೂರಿನಲ್ಲಿ ಅತಿ ಹಿಂದುಳಿದವರ ಸಮಾವೇಶ ನಡೆಸುವಂತೆ ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.
ಪ್ರಣವಾನಂದ ಸ್ವಾಮೀಜಿ ನೇತೃತ್ವದ ತಂಡ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ನೀವೂ ಮುಂದೆ ಸಿಎಂ ಆಗಲೇಬೇಕೆಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಅತಿ ಹಿಂದುಳಿದವರ ಸಮಾವೇಶ ಮಾಡುವುದಕ್ಕೆ ಒತ್ತಾಯಿಸಿದ್ದಾರೆ.
ಡಿಕೆ.ಶಿವಕುಮಾರ್ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಣವಾನಂದ ಸ್ವಾಮೀಜಿ. ರಾಜ್ಯದ ಮುಖ್ಯಮಂತ್ರಿ ಆಗಲು ಡಿಕೆಶಿ ಯೋಗ್ಯ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ತಡಮಾಡಬಾರದು. ನಮ್ಮೆಲ್ಲರ ಸಂಪೂರ್ಣ ಬೆಂಬಲ ಅವರಿಗಿದೆ. ಡಿಕೆಶಿ ಸಿಎಂ ಆಗಬೇಕೆಂಬ ಬೇಡಿಕೆ ಇದ್ದು, ಅವರಿಗೆ ಯೋಗ್ಯತೆ ಮತ್ತು ಹಕ್ಕು ಎರಡೂ ಇದೆ.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರೋದೇ ಎರಡು ಮೂರು ರಾಜ್ಯಗಳಲ್ಲಿ. ಹೀಗಾಗಿ ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳಬೇಕು. ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಯಾವ ಮುಖ್ಯಮಂತ್ರಿಗಳೂ ನಮ್ಮ ಪರ ಕೆಲಸ ಮಾಡಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇವೆ. ಡಿಕೆ ಶಿವಕುಮಾರ್ ಕಷ್ಟ, ನೋವು ಪಟ್ಟಿದ್ದಾರೆ. ಪಕ್ಷಕ್ಕಾಗಿ ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ ಸ್ವಾಮೀಜಿಗಳ ಭೇಟಿ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ಸ್ವಾಮೀಜಿಗಲು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅವರು ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳಲು ಜಾಗ ಇಲ್ಲ. ನಮಗೆ ಏನಾದರೂ ಮಾಡಿ ಜಾಗ ಕೊಡಿ ಎಂದು ಕೇಳಿದ್ದಾರೆ. ಸಿಎ ನಿವೇಶನ ಪರಿಶೀಲಿಸಿ ಅವರಿಗೆ ಜಾಗ ಕಲ್ಪಿಸುವ ಕೆಲಸ ಮಾಡುತ್ತೇನೆ. ಅವರ ಬೇಡಿಕೆ ನ್ಯಾಯಬದ್ಧವಾಗಿದೆ. ಹಿಂದುಳಿದ ವರ್ಗದ ಸ್ವಾಮೀಜಿಗಳ ಬೇಡಿಕೆ ಪರಿಗಣಿಸಲಾಗಿದೆ ಎಂದು ತಿಳಿಸಿದರು.
ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಅವರ ಪ್ರೀತಿ ಬಗ್ಗೆ ಏನು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಅವರ ಆಸೆ ಅವರು ವ್ಯಕ್ತಪಡಿಸಬಹುದು. ಆದರೆ ಏನೇ ತೀರ್ಮಾನ ಇದ್ದರೂ ಪಕ್ಷ ಕೈಗೊಳ್ಳುತ್ತದೆ ಎಂದು ನಾನು ಹಾಗೂ ಸಿಎಂ ಇಬ್ಬರೂ ಹೇಳಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



