ಕುದುರೆಮುಖ ಪೊಲೀಸರಿಂದ ಹಲ್ಲೆ, ಜಾತಿ ನಿಂದನೆ ಆರೋಪ: ದಲಿತ ಯುವಕ ಆತ್ಮಹತ್ಯೆಗೆ ಶರಣು
ರಿಕ್ಷಾದಿಂದ ಇಳಿದು ಮೊಬೈಲ್ ಫೋನ್‌ನಲ್ಲಿ ಟಾರ್ಚ್ ಹಾಕಿಕೊಂಡು ಸಮೀಪಕ್ಕೆ ಹೋದಾಗ ನಾವು ಮದ್ಯ ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿಯುತ್ತೀಯಾ ಎಂದು ಪ್ರಶ್ನಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು ಎಂದು ನಾಗೇಶ್ ದೂರು ನೀಡಿದ್ದರು.

ಚಿಕ್ಕಮಗಳೂರು: ಕುದುರೆಮುಖ ಪೊಲೀಸ್ ಸಿಬ್ಬಂದಿ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಕಳಸ ತಾಲ್ಲೂಕಿನ ಸಂಸೆ ಗ್ರಾಮದ ದಲಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಸಂಸೆ ಗ್ರಾಮದ ಬಸ್ತಿಗದ್ದೆ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಜುಲೈ 15ರಂದು ರಾತ್ರಿ 10.30ರ ಸುಮಾರಿನಲ್ಲಿ ಆಟೊರಿಕ್ಷಾದಲ್ಲಿ ತೆರಳುತ್ತಿದ್ದಾಗ ಕುದುರೆಮುಖ ಠಾಣೆಯ ಕಾನ್‌ಸ್ಟೆಬಲ್ ಸಿದ್ದೇಶ್ ಮತ್ತು ಇಬ್ಬರು ಸ್ಥಳೀಯರು ದಾರಿಗೆ ಅಡ್ಡಲಾಗಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು.
ರಿಕ್ಷಾದಿಂದ ಇಳಿದು ಮೊಬೈಲ್ ಫೋನ್‌ನಲ್ಲಿ ಟಾರ್ಚ್ ಹಾಕಿಕೊಂಡು ಸಮೀಪಕ್ಕೆ ಹೋದಾಗ ನಾವು ಮದ್ಯ ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿಯುತ್ತೀಯಾ ಎಂದು ಪ್ರಶ್ನಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು ಎಂದು ನಾಗೇಶ್ ದೂರು ನೀಡಿದ್ದರು. ಬಳಿಕ ಒಂದು ವಾರ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಈ ದೂರಿನ ಬೆನ್ನಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಅವರ ಆಟೊರಿಕ್ಷಾ ಮತ್ತು ಅಡಿಕೆಗೆ ಔಷಧಿ ಸಿಂಪಡಿಸುವ ಯಂತ್ರ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ನಾಗೇಶ್ ಜಾಮೀನು ಪಡೆದುಕೊಂಡಿದ್ದರು. ಆದರೆ, ತನ್ನ ಆಟೊ ಬಿಡಿಸಿಕೊಳ್ಳಲು ಹಣ ಇಲ್ಲದೆ, ದುಡಿಮೆಯೂ ಇಲ್ಲದೆ ಸಾಲದ ಕಂತು ಕೂಡ ಕಟ್ಟಲಾರದೆ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ನಾಗೇಶ್ ಆತ್ಮಹತ್ಯೆಗೆ ಮೊದಲು ಬರೆದಿರುವ ಪತ್ರದಲ್ಲಿ ನನ್ನ ಮೇಲೆ ಪೊಲೀಸ್ ಸಿಬ್ಬಂದಿಯ ದೌರ್ಜನ್ಯ ಮತ್ತು ಕುದುರೆಮುಖ ಸಬ್ ಇನ್‌ಸ್ಪೆಕ್ಟರ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಜಮಾಯಿಸಿದ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ನಾಗೇಶ್ ಸಾವಿಗೆ ಕಾರಣರಾದ ಕಾನ್‌ಸ್ಟೇಬಲ್ ಸಿದ್ದೇಶ ಮತ್ತು ಸುಳ್ಳು ದೂರು ದಾಖಲು ಮಾಡಿದ ಕುದುರೆಮುಖ ಸಬ್ ಇನ್‌ಸ್ಪೆಕ್ಟರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು. ನಾಗೇಶ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ದಲಿತ ಮುಖಂಡ ಅಂಗಡಿ ಚಂದ್ರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



