BJP ಆಡಳಿತದಲ್ಲೇ ಭಾರತದ ಮೇಲೆ ಉಗ್ರರ ದಾಳಿ ಹೆಚ್ಚು: ಸುರ್ಜೇವಾಲಾ
ಬಿಜೆಪಿಯ ಪಾಕಿಸ್ತಾನ ಪ್ರೇಮವನ್ನು ರಾಜ್ಯ ಬಿಜೆಪಿ ನಾಯಕರಿಗೆ ನೆನಪಿಸಬೇಕಿದೆ. ದೇಶದ ಇತಿಹಾಸದಲ್ಲೇ ಆಹ್ವಾನ ಇಲ್ಲದೇ ಪಾಕಿಸ್ತಾನಕ್ಕೆ ಹೋಗಿದ್ದು ಪ್ರಧಾನಿ ಮೋದಿ ಮಾತ್ರ.

ಬೆಳಗಾವಿ: ದೇಶದಲ್ಲಿ ಬಿಜೆಪಿ ಸರಕಾರ ಇದ್ದಾಗಲೇ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳಾಗಿವೆ. ಇದನ್ನು ಗಮನಿಸಿದರೆ ಬಿಜೆಪಿ ಮತ್ತು ಉಗ್ರರ ನಡುವೆ ಬಿಟ್ಟಿರಲಾರದ ಸಂಬಂಧ ಇದ್ದಂತಿದೆ. ದೇಶದ ಮೇಲೆ ದಾಳಿ ಆದಾಗ ಬಿಜೆಪಿ ಸರ್ಕಾರವೇ ಯಾಕಿರುತ್ತದೆ? ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗಲೇ ದೇಶದ ಸಂಸತ್ ಮೇಲೆ ದಾಳಿ, ವಿಮಾನ ಹೈಜಾಕ್ ಮಾಡಲಾಗಿದೆ. ಮೋದಿ ಪ್ರಧಾನಿ ಆದ ಬಳಿಕವೇ ಪಠಾಣ್ ಕೋಟ್ ಮೇಲೆ ಉಗ್ರರ ದಾಳಿ ಆಯಿತು. ಉರಿ ಸೇನಾ ನೆಲೆ ಮೇಲೆ ದಾಳಿ, ಪುಲ್ವಾಮಾದಲ್ಲಿ ಸೇನಾ ವಾಹನ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಅಮರನಾಥ ಯಾತ್ರಾರ್ಥಿಗಳ ಹತ್ಯೆ ಹಾಗೂ ಈಗ ಪಹಲ್ಗಾಮ್‌ನಲ್ಲಿನ ದಾಳಿ ಮಾಡಲಾಗಿದೆ. ಇದಕ್ಕೆ ಕಾರಣ ಏನು ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಪಾಕಿಸ್ತಾನ ಪ್ರೇಮವನ್ನು ರಾಜ್ಯ ಬಿಜೆಪಿ ನಾಯಕರಿಗೆ ನೆನಪಿಸಬೇಕಿದೆ. ದೇಶದ ಇತಿಹಾಸದಲ್ಲೇ ಆಹ್ವಾನ ಇಲ್ಲದೇ ಪಾಕಿಸ್ತಾನಕ್ಕೆ ಹೋಗಿದ್ದು ಪ್ರಧಾನಿ ಮೋದಿ ಮಾತ್ರ. ಪಾಕ್‌ಗೆ ಹೋಗಿ ಮೋದಿ ಕೇಕ್ ಕತ್ತರಿಸಿ ಬಂದಾಗ ಪಠಾಣ್‌ಕೋಟ್ ದಾಳಿ ರಿಟರ್ನ್ ಗಿಫ್ಟ್ ಆಗಿ ಪಾಕಿಸ್ತಾನ ಕೊಟ್ಟಿತ್ತು. ಮೋದಿ ಪ್ರಧಾನಿ, ಅಮಿತ್ ಶಾ ಗೃಹಮಂತ್ರಿ ಇದ್ದಾಗ ಬಿಜೆಪಿ ಸರ್ಕಾರ ಪಠಾಣ್‌ಕೋಟ್ ದಾಳಿ ತನಿಖೆಗೆ ಐಎಸ್‌ಐಯನ್ನು ಭಾರತಕ್ಕೆ ಆಹ್ವಾನಿಸಿತ್ತು.
ಹಲವು ಬಾರಿ ಬಿಜೆಪಿ ನಾಯಕರು ಹಾಗೂ ಐಎಸ್‌ಐಗೆ ಲಿಂಕ್ ಇದೆ. ಬಜರಂಗದಳದ ಬಲರಾಮ್ ಸಿಂಗ್ ಐಎಸ್ಐ ಪರ ಕೆಲಸ ಮಾಡುತ್ತಿದ್ದಾಗ ಸಿಕ್ಕಿಕೊಂಡಿದ್ದರು. ಡಿಆರ್‌ಡಿಒದಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಐಎಸ್ಐ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಆರ್‌ಎಸ್‌ಎಸ್ ಜೊತೆ ಸಂಬಂಧ ಇತ್ತು ಇಲ್ವಾ..? ಜಮ್ಮು ಕಾಶ್ಮೀರದಲ್ಲಿ ಆಸೀಫಾರನ್ನು ಬೇಟಿ ಬಚಾವೋ ಬೇಟಿ ಪಡಾವೋ ಮುಖವಾಡ ಹಾಕಿದ್ದ ಬಿಜೆಪಿ, ಅದೇ ಆಸೀಫಾ ಪಾಕ್‌ನಲ್ಲಿ ಉಗ್ರನ ಜೊತೆ ಸೇರಿ ಭಾರತದ ವಿರುದ್ಧ ವಿಷಕಾರಿದ್ದಳು ಅಲ್ಲವೇ? ಎಂದು ಪ್ರಶ್ನಿಸಿದರು.
ಉಗ್ರರನ್ನು ಮಟ್ಟ ಹಾಕಲು ಸರಕಾರದ ಪ್ರತಿಯೊಂದು ಕಾರ್ಯಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಗುಪ್ತಚರ ಹಾಗೂ ಭದ್ರತಾ ವೈಫಲ್ಯ ಕಾರಣ. ಅಲ್ಲಿ ಪೊಲೀಸ್ ಸುರಕ್ಷತೆ ಏಕೆ ಇರಲಿಲ್ಲ? ಪಹಲ್ಗಾಮ್‌ನಲ್ಲಿ ಮೂರು ಹಂತದ ಭದ್ರತೆ ಇದ್ದರೂ ದಾಳಿ ಆದ ಜಾಗದಲ್ಲಿ ಪೊಲೀಸರು ಏಕೆ ಇರಲಿಲ್ಲ? ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ಹೇಗೆ ಆಯಿತು? ಉಗ್ರರ ಎಲ್ಲ ದಾಳಿಯೂ ಬಿಜೆಪಿಯವರ ಮೂಗಿನ ಕೆಳಗೆ ಆಗಿದೆ. ಭದ್ರತಾ ವೈಫಲ್ಯಕ್ಕೆ ಬಿಜೆಪಿ ಸರಕಾರವೇ ಜವಾಬ್ದಾರಿ ಎಂದು ಆರೋಪಿಸಿದರು.
ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಕಾಂಗ್ರೆಸ್ ಬೆಂಬಲಿಸುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಈಗಾಗಲೇ ಮೂರು ಬಾರಿ ಹೇಳಿದ್ದೇನೆ. ನಮ್ಮ ಪಕ್ಷ ಕೇಂದ್ರದ ಜೊತೆಗೆ ಬೆಂಬಲವಾಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



