ಹಾವು ಕಡಿತ: ಪ್ರತಿ ತ್ರೈಮಾಸಿಕದಲ್ಲಿ ಮರಣಗಳ ಪರಿಶೋಧನೆಗೆ ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಸೂಚನೆ
ಹಾವು ಕಡಿತದಿಂದ ಸಂಭವಿಸುವ ಮರಣಗಳ ಲೆಕ್ಕ ಪರಿಶೋಧನೆಯ ಜವಾಬ್ದಾರಿಯನ್ನು ‘ಎಚ್1ಎನ್1 ಮರಣದ ಲೆಕ್ಕ ಪರಿಶೋಧನಾ ಸಮಿತಿ‘ಗೆ ವಹಿಸಲಾಗಿದೆ. ಲೆಕ್ಕ ಪರಿಶೋಧನೆಯನ್ನು ಪರಿಶೀಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ಬೆಂಗಳೂರು: ಹಾವು ಕಡಿತದಿಂದ ಉಂಟಾಗುವ ಸಾವುಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಶೋಧನೆಗೆ ಮಾಡುವಂತೆ ಎಲ್ಲಾ ಜಿಲ್ಲೆಗಳಿಗೆ ರಾಜ್ಯ ಆರೋಗ್ಯ ಇಲಾಖೆ ಸೋಮವಾರ ಸೂಚನೆ ನೀಡಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಹಾವು ಕಡಿತದಿಂದ ಸಂಭವಿಸುವ ಮರಣಗಳ ಲೆಕ್ಕ ಪರಿಶೋಧನೆಯ ಜವಾಬ್ದಾರಿಯನ್ನು ‘ಎಚ್1ಎನ್1 ಮರಣದ ಲೆಕ್ಕ ಪರಿಶೋಧನಾ ಸಮಿತಿ‘ಗೆ ವಹಿಸಲಾಗಿದೆ. ಲೆಕ್ಕ ಪರಿಶೋಧನೆಯನ್ನು ಪರಿಶೀಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಹಾವು ಕಡಿತ ಪ್ರಕರಣಗಳ ಪರಿಶೀಲನಾ ಸಭೆಯನ್ನು ಮೂರು ತಿಂಗಳಿಗೊಮ್ಮೆ ಮಾಡಬೇಕು. ತಡೆಗಟ್ಟುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದೆ.
2023ರಲ್ಲಿ ಹಾವು ಕಡಿತದ 6,596 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 19 ಮಂದಿ ಮರಣ ಹೊಂದಿದ್ದರು. ಆನಂತರ ಹಾವು ಕಡಿತವನ್ನು ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಲಾಗಿತ್ತು. 2024ರಲ್ಲಿ 13,235 ಪ್ರಕರಣಗಳು ದಾಖಲಾಗಿದ್ದು, 100 ಜನರು ಮೃತಪಟ್ಟಿದ್ದರು.
ಹಾವು ಕಡಿತದಿಂದ ಉಂಟಾಗುವ ಅನಾರೋಗ್ಯ ಮತ್ತು ಮರಣವನ್ನು ತಪ್ಪಿಸಲು ಆರೋಗ್ಯ ಇಲಾಖೆ ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗಳವರೆಗೆ ಹಾವಿನ ಪ್ರತಿವಿಷ (ಎಎಸ್‌ವಿ) ದಾಸ್ತಾನು ಇಟ್ಟುಕೊಳ್ಳಲು ಕ್ರಮ ಕೈಗೊಂಡಿತ್ತು. ಹಾವು ಕಡಿತ ಪ್ರಕರಣಗಳನ್ನು ನಿರ್ವಹಿಸಲು ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿತ್ತು.
ಎಲ್ಲೇ ಹಾವು ಕಡಿತದ ಘಟನೆಗಳಾದರೂ ಅವು ವಿಳಂಬವಿಲ್ಲದೇ ವರದಿಯಾಗಬೇಕು. ಹಾವು ಕಡಿತಕ್ಕೊಳಗಾದವರು ಸಾಂಪ್ರದಾಯಿಕ ನಂಬಿಕೆ ಇಟ್ಟುಕೊಂಡು ಹಳ್ಳಿ ಮದ್ದು ಮಾಡುವುದರ ಬದಲು, ಸಮಯ ವ್ಯರ್ಥ ಮಾಡದೇ ತಕ್ಷಣವೇ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಬರುವಂತೆ ಮಾಡಬೇಕು. ಹಾವು ಕಡಿದಾಗ ಆಸ್ಪತ್ರೆಗೆ ಬರುವುದನ್ನು ತಡಮಾಡುವುದೇ ಮರಣಕ್ಕೆ ಮುಖ್ಯ ಕಾರಣವಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



