ರಾಜ್ಯ

ಚಿಕ್ಕಬಳ್ಳಾಪುರ: ಅತಿ ದೊಡ್ಡ ಮೊಬೈಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಏಳು ಜನರ ಬಂಧನ

ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನ ಕಳ್ಳರು ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು.

ಚಿಕ್ಕಬಳ್ಳಾಪುರ: ಅತಿ ದೊಡ್ಡ ಮೊಬೈಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಏಳು ಜನರ ಬಂಧನ
ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈ ಎಸ್‌ಪಿ ರವಿ ಕುಮಾರ್, ವೃತ್ತ ನಿರೀಕ್ಷಕ ಸೂರ್ಯ ಪ್ರಕಾಶ್
Published On :

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಸಿಇಎನ್(ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸರು ಹರಿಯಾಣ ಮತ್ತು ರಾಜಸ್ಥಾನದ ಮೇವಾತ್ ಪ್ರದೇಶದ ನಿವಾಸಿಗಳಾದ ಏಳು ಜನರನ್ನು ಬಂಧಿಸುವ ಮೂಲಕ ಪ್ರಮುಖ ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ನವೆಂಬರ್ 22, 2024 ರಂದು ಸೇಫ್ ಸೀಡ್ ಕ್ಯಾರಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಪದ್ಮನಾಬ್ ಪೆರೇಸಂದ್ರ ಅವರು ಮೊಬೈಲ್ ಕಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದರು.

ದೆಹಲಿಯ ನೋಯ್ಡಾದಿಂದ ಹೋಲ್ ಸೇಲ್ ಡೀಲರ್‌ಗಳಿಗೆ ಸಾಗಿಸಲಾಗಿದ್ದ ಸುಮಾರು ಮೂರು ಕೋಟಿ ರೂ. ಮೌಲ್ಯದ ರೆಡ್‌ಮಿ ಮೊಬೈಲ್ ಗಳ 170 ಬಾಕ್ಸ್‌ಗಳು(ಒಟ್ಟು 3400 ಮೊಬೈಲ್ ಫೋನ್‌ಗಳು) ಮತ್ತು 163 ಬಾಕ್ಸ್‌ಗಳ ಪೊಕೊ ಮೊಬೈಲ್ (ಒಟ್ಟು 3260 ಮೊಬೈಲ್‌ಗಳು)ಗಳನ್ನು ಹೊತ್ತ ಟ್ರಕ್‌ವೊಂದು ರಾಷ್ಟ್ರೀಯ ಹೆದ್ದಾರಿ-44ರ ಮೂಲಕ ಬೆಂಗಳೂರಿಗೆ ಬರುತ್ತಿತ್ತು. ಇದರಲ್ಲಿದ್ದ ಎಲ್ಲಾ ಮೊಬೈಲ್ ಗಳನ್ನು ಕಳ್ಳತನ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿಯ ಡಾಬಾ ವೊಂದರ ಬಳಿ ಖಾಲಿ ಕಂಟೇನರ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪೆರೆಸಂದ್ರದಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ನಯಾಜ್ ಬೇಗ್ ನೇತೃತ್ವದ ಪೊಲೀಸ್ ತಂಡವು ಪ್ರಮುಖ ಆರೋಪಿ, ವಾಹನ ಚಾಲಕ ರಾಹುಲ್ ಹಾಗೂ ಇತರ ಆರೋಪಿಗಳಾದ ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ನನ್ನು ಬಂಧಿಸಲಾಗಿದೆ ಎಂದು ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ಆರೋಪಿಗಳು ಹರಿಯಾಣ ಮತ್ತು ರಾಜಸ್ಥಾನದ ನಿವಾಸಿಗಳಾಗಿರುವುದರಿಂದ, ಈ ವಿಷಯವನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಸೂರ್ಯ ಪ್ರಕಾಶ್ ನೇತೃತ್ವದ ಸಿಇಎನ್ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಕುಶಾಲ್ ಚೌಕ್ಸೆ ಹೇಳಿದರು.

ಚಿಕ್ಕಬಳ್ಳಾಪುರ ಸಮೀಪ ಮೊಬೈಲ್‌ ದೋಚಿದ್ದ ಕಳ್ಳರು ಬೇರೊಂದು ಟ್ರಕ್‌ಗೆ ತುಂಬಿಕೊಂಡು ದೆಹಲಿಯಲ್ಲಿ ಮಾರಾಟ ಮಾಡಿದ್ದರು. ಸರಿಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನ ಕಳ್ಳರು ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು. ಅಲ್ಲಿಂದ ಮೊಬೈಲ್‌ಗಳು ದೇಶದ ನಾನಾ ರಾಜ್ಯಗಳಿಗೆ ಸಪ್ಲೈ ಆಗಿವೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ. ಹೀಗಾಗಿ ಮೊಬೈಲ್‌ ಮಾರಿ ಆರೋಪಿಗಳ ಖಾತೆಯಲ್ಲಿ ಉಳಿದಿದ್ದ 20 ಲಕ್ಷ ರೂ. ನಗದನ್ನು ಸಹ ಸೀಜ್‌ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.