ಮಂಗಳೂರಿನಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ; 1 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗಿ
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ನಡೆದ ಅತಿದೊಡ್ಡ ಪ್ರತಿಭಟನೆ ಇದಾಗಿದೆ.

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ವಿರೋಧಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಈ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ನಡೆದ ಅತಿದೊಡ್ಡ ಪ್ರತಿಭಟನೆ ಇದಾಗಿದ್ದು, ಮಂಗಳೂರಿನ ಉಲೇಮಾ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತು ಇತರ ಹಲವಾರು ಮುಸ್ಲಿಂ ಸಂಘಟನೆಗಳು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವು.
ಅಡ್ಯಾರ್‌ನ ಷಾ ಗಾರ್ಡನ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದರು. ಭಾಷಣದುದ್ದಕ್ಕೂ ಕೇಂದ್ರದ ವಿರುದ್ಧ ಹರಿಹಾಯ್ದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಶೇಖುಲ್ಲಾ ತಕ್ವಾ ಉಸ್ತಾದ್, ವಕ್ಫ್ ಕಾಯ್ದೆಗೆ ಮಾಡಲಾದ ಬದಲಾವಣೆಗಳು ಮುಸ್ಲಿಂ ಸಮುದಾಯದ ಸಾಂಸ್ಥಿಕ ಅಡಿಪಾಯವನ್ನು "ದುರ್ಬಲಗೊಳಿಸಲಿದೆ" ಎಂದು ಹೇಳಿದರು.
"ಮುಸ್ಲಿಂ ಸಮುದಾಯವು ಹಿಂದೆ ದಬ್ಬಾಳಿಕೆಯನ್ನು ಎದುರಿಸಿದೆ. ಆದರೆ ಈ ಬಾರಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ, ವಕ್ಫ್‌ನ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.
ನಂತರ ಮಾತನಾಡಿದ ಕರ್ನಾಟಕ ವಕ್ಫ್ ಮಂಡಳಿಯ ಮಾಜಿ ಕಾರ್ಯದರ್ಶಿ ಶಾಫಿ ಸಅದಿ ಉಸ್ತಾದ್, "ಮೇ 5ರಂದು ಸುಪ್ರೀಂ ಕೋರ್ಟ್ ಈ ಕಾಯ್ದೆ ತಂದವರನ್ನು ಬೀದಿಗೆ ತರಲಿದೆ. ಯಾವ ಹಿಂದೂಗಳ ಆಸ್ತಿಯನ್ನು ವಕ್ಫ್ ಮಂಡಳಿ ಮುಟ್ಟಿಲ್ಲ. ಕರ್ನಾಟಕದಲ್ಲಿ ಇತರ ಧರ್ಮೀಯರ ಆರಾಧನಾ ವಿಚಾರದಲ್ಲಿ ವಕ್ಫ್ ಮಂಡಳಿ ಹಸ್ತಕ್ಷೇಪ ಮಾಡಿಲ್ಲ. 26 ಲಕ್ಷ ಎಕರೆ ವಕ್ಫ್ ಆಸ್ತಿಯನ್ನು ಕಬಳಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರದ್ದಾಗಿದೆ. ಯಾರಿಗೂ ಇಲ್ಲದ ಕಾನೂನನ್ನು ಮುಸ್ಲಿಮರಿಗೆ ಹೇರಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಮರ ಧಾರ್ಮಿಕ ಭೂಮಿಯನ್ನು ಮುಟ್ಟಲು ಬಿಡಲ್ಲ" ಎಂದರು.
ವಕ್ಫ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿ ಅರೆಸೇನಾ ಪಡೆ ಭದ್ರತೆ ಅಳವಡಿಸಿತ್ತು. ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದರಿಂದ ಮುಸ್ಲಿಂ ಯುವಕರು ಬಸ್, ಲಾರಿಗಳ ಮೇಲೆ ನಿಂತಿದ್ದ ದೃಶ್ಯ ಕಂಡುಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



