News headlines 18-04-2025 | ಜಾತಿಗಣತಿ ಕಳವಳ ಕಾಂಗ್ರೆಸ್ ಗೆ ಸಮಸ್ಯೆ- ಸಚಿವ ಜಾರಕಿಹೊಳಿ; CET ಜನಿವಾರ ಜಟಾಪಟಿ: ತಪ್ಪಿತಸ್ಥರ ವಿರುದ್ಧ ಕ್ರಮ- ಶಿಕ್ಷಣ ಸಚಿವ; ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ- ಹೈಕೋರ್ಟ್ ಆದೇಶ ಉಲ್ಲಂಘನೆ

1. CET ಜನಿವಾರ ಜಟಾಪಟಿ; ತಪ್ಪಿತಸ್ಥರ ವಿರುದ್ಧ ಕ್ರಮ- ಶಿಕ್ಷಣ ಸಚಿವ
ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ಘಟನೆಯನ್ನು ರಾಜ್ಯ ಸರ್ಕಾರ ಖಂಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಯಾವ ಇಲಾಖೆಯೂ ಇಂತಹ ನಿರ್ದೇಶನ ಕೊಟ್ಟಿಲ್ಲ. ಘಟನೆಗೆ ಕಾರಣರಾದವರ ವಿರುದ್ದ ಕ್ರಮ ಆಗಬೇಕು. ಪರೀಕ್ಷೆಯಿಂದ ವಂಚಿತರಾದವರಿಗೆ ಮರುಪರೀಕ್ಷೆ ಕೊಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ನಿಖರ ಮಾಹಿತಿ ಪಡೆಯುತ್ತೇನೆ. ಜನಿವಾರ ತೆಗೆಯುವ ನಿಯಮ ಇಲ್ಲ. ಜಾತಿ ಧರ್ಮಗಳಿಗೆ ಗೌರವ ಕೊಡಬೇಕಾಗುತ್ತದೆ. ಘಟನೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿ, ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆಂದು ಹೇಳಿದ್ದಾರೆ.
2. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ- ಹೈಕೋರ್ಟ್ ಆದೇಶ ಉಲ್ಲಂಘನೆ
ಮಂಗಳೂರು ನಗರದ ಹೊರವಲಯದ ಅಡ್ಯಾರ್ ಶಾ ಮೈದಾನದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಸಂಯುಕ್ತ ಖಾಝಿಗಳ ನಾಯಕತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಹೆದ್ದಾರಿಯಲ್ಲೇ ಜಮಾಯಿಸಿದ ಮುಸ್ಲಿಂ ಯುವಕರು, ಕಾಯ್ದೆ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಜನರನ್ನು ನಿಯಂತ್ರಣ ಮಾಡಲು ಆಯೋಜಕರು ಹರಸಾಹಸ ಪಟ್ಟರು. ಇನ್ನು ವಕ್ಫ್ ವಿರುದ್ಧದ ಪ್ರತಿಭಟನೆ ವೇಳೆ ಹೈಕೋರ್ಟ್ ಆದೇಶ ಉಲ್ಲಂಘನೆಯಾಯ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸದಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಇಂದು ಹೆದ್ದಾರಿ ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದು, ಈ ಮೂಲಕ ಹೈಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ.
3. ಜಾತಿಗಣತಿ ಕಳವಳ ಬಗೆಹರಿಸದಿದ್ದರೆ ಕಾಂಗ್ರೆಸ್ ಗೆ ಸಮಸ್ಯೆ- ಸಚಿವ ಜಾರಕಿಹೊಳಿ
'ಜಾತಿ ಗಣತಿ' ವರದಿಯ ಬಗ್ಗೆ ಚರ್ಚಿಸಲು ಗುರುವಾರ ಸಂಜೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ವರದಿ ಬಗ್ಗೆ ಯಾರೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಯಿತು. ಚರ್ಚೆ ಅಪೂರ್ಣವಾಗಿದೆ ಮತ್ತು ಅದನ್ನು ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ. ಈ ವಿಷಯವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಸಂಪುಟ ಸಭೆಯಲ್ಲಿ ಯಾವುದೇ ಆಕ್ರಮಣಕಾರಿ ವಾದ ನಡೆದಿರುವುದನ್ನು ತಳ್ಳಿಹಾಕಿದ್ದು, ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ ಅಷ್ಟೇ. ಏರು ಧ್ವನಿ ಅಥವಾ ವಾಗ್ವಾದ, ಅಂತಹದ್ದೇನೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಮಧ್ಯೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ, ಜಾತಿ ಜನಗಣತಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ಶೀಘ್ರದಲ್ಲೇ ಅಸಂಭವ. ಇದರಲ್ಲಿ ಸಂಕೀರ್ಣತೆಗಳು ಇರುವುದರಿಂದ ನಿರ್ಧಾರ ಕೈಗೊಳ್ಳುವುದು ಒಂದು ವರ್ಷ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ವರದಿಯ ಕುರಿತು ವಿವಿಧ ಜಾತಿಗಳು ಎತ್ತಿರುವ ಕಳವಳಗಳನ್ನು ಪರಿಹರಿಸುವಲ್ಲಿ ಯಾವುದೇ ತಪ್ಪು ಹೆಜ್ಜೆ ಇಟ್ಟರೆ ಭವಿಷ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಗಳಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
4. ಮಹಿಳೆಯರು ತ್ರಿಶೂಲವನ್ನು ವ್ಯಾನಿಟಿ ಬ್ಯಾಗ್ನಲ್ಲಿಟ್ಟುಕೊಳ್ಳಿ ಅತ್ಯಾಚಾರ ಮಾಡಲು ಬಂದವರಿಗೆ ಚುಚ್ಚಿ
ಮಹಿಳೆಯರು ತ್ರಿಶೂಲವನ್ನು ವ್ಯಾನಿಟಿ ಬ್ಯಾಗ್ನಲ್ಲಿಟ್ಟುಕೊಳ್ಳಿ. ಯಾರಾದರು ಚುಡಾಯಿಸಿದರೆ ಅಥವಾ ಅತ್ಯಾಚಾರ ಮಾಡಲು ಬಂದ್ರೆ ಚುಚ್ಚಿಬಿಡಿ. ಎಲ್ಲಿ ಒದಿಬೇಕು ಅಂತ ಗೊತ್ತಿದೆ ಅಲ್ವಾ, ಅಲ್ಲಿಗೆ ಒದ್ದುಬಿಡಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿವಿಮಾತು ಹೇಳಿದ್ದಾರೆ. ಹುಬ್ಬಳ್ಳಿಯ ಶಿವಕೃಷ್ಣ ಮಂದಿರದಲ್ಲಿ ಶ್ರೀರಾಮ ಸೇನೆವತಿಯಿಂದ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಶ್ರೀರಾಮಸೇನೆ ಕಾರ್ಯಕರ್ತರು ತ್ರಿಶೂಲ ಹಂಚಿದರು. ತ್ರಿಶೂಲ ದೀಕ್ಷೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ಆಯುಧ ಪೂಜೆ ದಿನ ಮನೆಯಲ್ಲಿ ತಲವಾರ ಪೂಜೆ ಮಾಡಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


