ರಾಜ್ಯ

ಕೊಪ್ಪಳದಲ್ಲಿ ಮೂಢ ನಂಬಿಕೆ: ಜ್ವರ ಕಡಿಮೆ ಮಾಡಲು ಮಕ್ಕಳಿಗೆ ಊದುಬತ್ತಿಯಿಂದ ಸುಡುವ ಪಾಲಕರು; ಈವರೆಗೆ 18 ಪ್ರಕರಣ ಬೆಳಕಿಗೆ

ಕನಕಗಿರಿ ತಾಲೂಕಿನ ವಿಠ್ಠಲಾಪುರದಲ್ಲಿ 7 ತಿಂಗಳ ಮಗುವಿಗೆ ಜ್ವರ ಕಡಿಮೆಯಾಗಲಿಲ್ಲ ಎಂದು ಮಗುವಿನ ತಾಯಿ ಡಿ. 4 ರಂದು ಊದುಬತ್ತಿಯಿಂದ ಸುಟ್ಟಿದ್ದಳು.

ಕೊಪ್ಪಳದಲ್ಲಿ ಮೂಢ ನಂಬಿಕೆ: ಜ್ವರ ಕಡಿಮೆ ಮಾಡಲು ಮಕ್ಕಳಿಗೆ ಊದುಬತ್ತಿಯಿಂದ ಸುಡುವ ಪಾಲಕರು; ಈವರೆಗೆ 18 ಪ್ರಕರಣ ಬೆಳಕಿಗೆ
ಸಂಗ್ರಹ ಚಿತ್ರ
Published On :

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ತಾಯಿಯೊಬ್ಬಳು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ.

ಕನಕಗಿರಿ ತಾಲೂಕಿನ ವಿಠ್ಠಲಾಪುರದಲ್ಲಿ 7 ತಿಂಗಳ ಮಗುವಿಗೆ ಜ್ವರ ಕಡಿಮೆಯಾಗಲಿಲ್ಲ ಎಂದು ಮಗುವಿನ ತಾಯಿ ಡಿ. 4 ರಂದು ಊದುಬತ್ತಿಯಿಂದ ಸುಟ್ಟಿದ್ದಳು. ಬಳಿಕ ಮಗುವಿಗೆ ಚಿಕಿತ್ಸೆ ಕೊಡಿಸಲು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಬಳಿಕ ಫೆ.2ರಂದು ನಡೆದ ಶಿಶು ಮರಣ ತಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್, ಕೂಡಲೇ ಪಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಯಲ್ಲಿ ಮಕ್ಕಳು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಮಾಡಿದಾಗ, ಜ್ವರ ಬಂದ ಮಕ್ಕಳಿಗೆ ಪೋಷಕರು ಊದುಬತ್ತಿಯಿಂದ ಸುಟ್ಟಿರುವುದು ಗೊತ್ತಾಗಿದೆ. ಹೀಗಾಗಿ, ಈ ಕುರಿತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಈ ಮಕ್ಕಳ ಬಗ್ಗೆ ನಿಗಾವಹಿಸಿ ಮತ್ತು ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದಾರೆ.

ಊದುಬತ್ತಿಯಿಂದ ಮಕ್ಕಳಿಗೆ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯಇಲಾಖೆಯಿಂದ 18 ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ.

ಜಗತ್ತು ಬಹಳ ಮುಂದೆ ಸಾಗುತ್ತಿದ್ದರೂ ವಿಠಲಾಪುರದ ಗ್ರಾಮಸ್ಥರು ಇನ್ನೂ ಮೂಢನಂಬಿಕೆಯನ್ನು ನಂಬುತ್ತಿದ್ದಾರೆ. ವೈದ್ಯಕೀಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳದೆ ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಜ್ವರ ಪೀಡಿತ ಮಕ್ಕಳಿಗೆ ಊದುಬತ್ತಿಯಿಂದ ಸುಡುವ ನಂಬಿಕೆ ಕೇಳಿ ನಮಗೆ ಆಶ್ಚರ್ಯವಾಯಿತು. ಈ ರೀತಿಯ ಸಲಹೆ ನೀಡುವವರನ್ನು ಬಂಧಿಸಬೇಕೆಂದು ಅಧಿಕಾರಿಗಳು ಹೇಳಿದ್ದಾರೆ.

ಕನಕಗಿರಿ ತಾಲ್ಲೂಕು ಆಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ತಪ್ಪು ಮಾಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಜಿಲ್ಲಾಧಿಕಾರಿ ನಮಗೆ ಸೂಚಿಸಿದ್ದಾರೆ. ಸೂಚನೆ ಹಿನ್ನೆಲೆಯಲ್ಲಿ ಜಾಗೃತರಾಗಿದ್ದು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡತ್ತಿದ್ದೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.