ಬೆಂಗಳೂರಿನಲ್ಲಿ 36 ಮಿ.ಮೀ ದಾಖಲೆ ಮಳೆ: ಅಪಾರ್ಟ್ ಮೆಂಟ್ ಗೆ ನುಗ್ಗಿದ ನೀರು, ಹಲವೆಡೆ ಅವಾಂತರ
ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಬಿನ್ನಿಪೇಟೆಯಲ್ಲಿ ಕಂಪೌಂಡ್ ಕುಸಿದು ಹತ್ತಾರು ಗಾಡಿಗಳು ಜಖಂಗೊಂಡಿವೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಕಂಪೌಂಡ್ ಕುಸಿದು 16 ಮನೆಗಳಿಗೆ ಜಲದಿಗ್ಭಂಧನ ಉಂಟಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತಡೆಗೋಡೆ ಕುಸಿದು ಅಪಾರ್ಟ್ ಮೆಂಟ್ ಒಳಗೆ ನೀರು ನುಗ್ಗಿದೆ. ಸರಾಸರಿ 36 ಮಿಲಿ ಮೀಟರ್ ಮಳೆ ದಾಖಲಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಬಿನ್ನಿಪೇಟೆಯಲ್ಲಿ ಕಂಪೌಂಡ್ ಕುಸಿದು ಹತ್ತಾರು ಗಾಡಿಗಳು ಜಖಂಗೊಂಡಿವೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಕಂಪೌಂಡ್ ಕುಸಿದು 16 ಮನೆಗಳಿಗೆ ಜಲದಿಗ್ಭಂಧನ ಉಂಟಾಗಿದೆ.
ರಸ್ತೆಗಳೆಲ್ಲ ಹಳ್ಳಗಳಂತಾಗಿ ವಾಹನ ಸವಾರರು ಪರದಾಡಿದರು. ತಡರಾತ್ರಿವರೆಗೂ ಮಳೆ ಸುರಿದಿದ್ದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು. ಅಲ್ಲದೇ ಕೆಲವು ಕಡೆ ಟ್ರಾಫಿಕ್ ಆಗಿ ಡ್ರೈವರ್ಗಳು ಸಮಸ್ಯೆ ಅನುಭವಿಸಿದರು.ವರುಣನ ಅಬ್ಬರಕ್ಕೆ ಸಿಲಿಕಾನ್ ಸಿಟಿ ತತ್ತರಿಸಿದೆ. ರಾತ್ರಿಯಿಂದ ಸುರಿದ ಭಾರೀ ಮಳೆಗೆ ಬೆಂಗಳೂರು ಸ್ತಬ್ಧವಾಗಿದೆ. ಸಂಜೆಯಿಂದ ಜೋರು ಮಳೆ ಬಿದ್ದಿದ್ದು ಹಲವು ಕಡೆ ಜನಜೀವನ ತೀವ್ರ ಸಂಕಷ್ಟಕ್ಕೆ ಒಳಗಾದರು.ಕೆ.ಆರ್ ಮಾರುಕಟ್ಟೆ, ರಾಜಾಜಿನಗರ, ವಿಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ವೈಟ್ ಫೀಲ್ಡ್, ಹೆಬ್ಬಾಳ, ಕಾರ್ಪೊರೇಷನ್, ಕೋರಮಂಗಲ, ಸೇರಿ ಹಲವು ಕಡೆ ಭಾರಿ ಮಳೆಯಾಗಿದೆ.
ಬೆಂಗಳೂರಿನ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಮಲ್ಲೇಶ್ವರಂ, ಶಾಂತಿನಗರ, ರಾಜಾಜಿನಗರ, ವೈಟ್ಫೀಲ್ಡ್, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು. ಮಡಿವಾಳ ಕೆಳಸೇತುವೆ ಜಲಾವೃತವಾಗಿದ್ದರಿಂದ ಜನರು ಅಕ್ಷರಶಃ ಸಂಕಷ್ಟ ಅನುಭವಿಸಿದರು. ವಿವೇಕ ನಗರದಲ್ಲಂತೂ ಎಲ್ಲಿ ನೋಡಿದರು ಮಳೆ ನೀರು ನಿಂತಿದ್ದರಿಂದ ದ್ವಿಚಕ್ರ ಸವಾರರು ಪರದಾಡಿದರು. ಇನ್ನು ಪಣತ್ತೂರು ರೈಲ್ವೆ ಬ್ರಿಡ್ಜ್ ಕೆಳಗೆ ನೀರು ನಿಂತಿದ್ದು ಡ್ರೈವರ್ಗಳಿಗೆ ತಲೆನೋವು ಎನಿಸಿತು.
2 ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ: ಟ್ರ್ಯಾಕ್ಟರ್ ಮೂಲಕ ಶಿಫ್ಟ್
ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್ಗಳಿದ್ದು, 2ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಹಾಕಿತ್ತು. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನ ಶಿಫ್ಟ್ ಮಾಡಲಾಗಿದೆ. ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ನಲ್ಲಿ 80 ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ.
ವೃದ್ಧಾಶ್ರಮಕ್ಕೆ ನುಗ್ಗಿದ ನೀರು: ಪರದಾಟ
ಮಹಾಮಳೆಯಿಂದ ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದ್ದಾರೆ. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು. ಹಾಗಾಗಿ ಫ್ಲೈವುಡ್ ಹಾಗೂ ಗ್ಲಾಸ್ ಅಂಗಡಿ ಸಂಪೂರ್ಣ ಜಲಾವೃತವಾಗಿತ್ತು.
ಯಲ್ಲೋ ಅಲರ್ಟ್:
ಅಕ್ಟೋಬರ್ 9ರವರೆಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.ಇನ್ನೂ ಐದು ದಿನಗಳ ರಾಜ್ಯದಲ್ಲಿ ಭಾರೀ ಮಳೆ ಅಲರ್ಟ್ ಘೋಷಣೆ ಮಾಡಲಾಗಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡು ಪ್ರದೇಶ, ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದಿನಿಂದ ಅಕ್ಟೋಬರ್ 8ರವರೆಗೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹಾಗೂ ಇಂದು ಮತ್ತೆ ನಾಳೆ ಉತ್ತರ ಒಳನಾಡು ಪ್ರದೇಶದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಇಂದಿನಿಂದ ಅಕ್ಟೋಬರ್ 9ರ ವರೆಗೆ ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



