ಸಾಕ್ಷ್ಯ ನಾಶಕ್ಕಾಗಿ ನಿವೇಶನ ವಾಪಸ್: ಮುಡಾ ನಿರ್ಧಾರ ಪ್ರಶ್ನಿಸಿದ ಕುಮಾರಸ್ವಾಮಿ!
ಹೈಕೋರ್ಟ್ ನಲ್ಲಿ ಆ ನಿವೇಶನಗಳು ತಮ್ಮ ಕುಟುಂಬಕ್ಕೆ ಸೇರಿದ್ದವು ಎಂದು ಹೇಳಿದ್ದಾರೆ. ವಿಶೇಷ ನ್ಯಾಯಾಲಯ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದು, ನಿವೇಶನಗಳು ಈಗ ಕೋರ್ಟ್ ವ್ಯಾಪ್ತಿಯಲ್ಲಿದ್ದು, ಸಿದ್ದರಾಮಯ್ಯ ಕುಟುಂಬ ಹೇಗೆ ವಾಪಸ್ ನೀಡಲು ಆಗುತ್ತದೆ? ಲೋಕಾಯುಕ್ತ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದರೆ ಮುಡಾ ಆಯುಕ್ತರು ಕೂಡಲೇ ಬಂಧಿಸಬೇಕು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಂದ 14 ನಿವೇಶನ ವಾಪಸ್ ಪಡೆಯುವ ಮುಡಾ ನಿರ್ಧಾರವನ್ನು ಬುಧವಾರ ಪ್ರಶ್ನಿಸಿರುವ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಇದು ಸಾಕ್ಷ್ಯ ನಾಶ ಮಾಡಿ, ಹಗರಣ ಮುಚ್ಚಿಹಾಕುವ ತಂತ್ರ ಎಂದಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಮುಡಾ ಆಯುಕ್ತರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡಾ ಮುಡಾ ಆಯುಕ್ತರ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಇದು ಕಾನೂನುಬಾಹಿರ ಎಂದಿದ್ದಾರೆ. ಪಾರ್ವತಿ ಅವರ ಒಪ್ಪಿಗೆ ಮೇರೆಗೆ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳನ್ನು ವಾಪಸ್ ಪಡೆಯಲು ಮುಡಾ ಮಂಗಳವಾರ ನಿರ್ಧರಿಸಿತ್ತು. ಈ ನಿವೇಶನಗಳ ಕ್ರಯ ಪತ್ರ ರದ್ದುಗೊಳಿಸಲು ಆದೇಶಿಸಲಾಗಿದೆ ಎಂದು ಮುಡಾ ಆಯುಕ್ತ ಎ.ಎನ್. ರಘುನಂದನ್ ಮಂಗಳವಾರ ಹೇಳಿದ್ದರು.
ಜೆಡಿಎಸ್ ಪಕ್ಷದ ಕಚೇರಿ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಹೈಕೋರ್ಟ್ ನಲ್ಲಿ ಆ ನಿವೇಶನಗಳು ತಮ್ಮ ಕುಟುಂಬಕ್ಕೆ ಸೇರಿದ್ದವು ಎಂದು ಹೇಳಿದ್ದಾರೆ. ವಿಶೇಷ ನ್ಯಾಯಾಲಯ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದು, ನಿವೇಶನಗಳು ಈಗ ಕೋರ್ಟ್ ವ್ಯಾಪ್ತಿಯಲ್ಲಿದ್ದು, ಸಿದ್ದರಾಮಯ್ಯ ಕುಟುಂಬ ಹೇಗೆ ವಾಪಸ್ ನೀಡಲು ಆಗುತ್ತದೆ? ಲೋಕಾಯುಕ್ತ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದರೆ ಮುಡಾ ಆಯುಕ್ತರು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕೋರ್ಟ್ ನಲ್ಲಿ ವಿಚಾರಣೆ ನಡೆದು ಆದೇಶ ನೀಡಿದ ನಂತರ ಮುಖ್ಯಮಂತ್ರಿ ಕುಟುಂಬ ನಿವೇಶನ ವಾಪಸ್ ನೀಡುವ ನಾಟಕವಾಡುತ್ತಿದ್ದು, ಮುಡಾ ಆಯುಕ್ತರು ಯಾವ ಆಧಾರದ ಮೇಲೆ ನಿವೇಶನ ಪಡೆಯುತ್ತಾರೆ? ಹೇಗೆ ಖಾತೆ ಬದಲಾವಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈ ಪ್ರಕರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಲೋಕಾಯುಕ್ತ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಿವೇಶನ ವಾಪಸ್ ಪಡೆಯುವಂತೆ ಮುಡಾ ಆಯುಕ್ತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಎಲ್ಲಾವುಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿದರು.
ಸಾಕ್ಷಿನಾಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವರು, ಲೋಕಾಯುಕ್ತ ಅಧಿಕಾರಿಗಳು, ಮುಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ. ಇದರ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಕುಮಾರಸ್ವಾಮಿ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



