ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಎಸ್‌ಐಟಿ ನೋಟಿಸ್; ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ನೀಡಿದೆ. ಜೂನ್ 1 ರಂದು ಹೊಳೆನರಸೀಪುರದ ಮನೆಯಲ್ಲಿ ತನಿಖೆ ಮತ್ತು ವಿಚಾರಣೆಗೆ ಹಾಜರಿರುವಂತೆ ಭವಾನಿ ಅವರಿಗೆ ತಿಳಿಸಿದೆ.

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ನೀಡಿದೆ. ಜೂನ್ 1 ರಂದು ಹೊಳೆನರಸೀಪುರದ ಮನೆಯಲ್ಲಿ ತನಿಖೆ ಮತ್ತು ವಿಚಾರಣೆಗೆ ಹಾಜರಿರುವಂತೆ ಭವಾನಿ ಅವರಿಗೆ ತಿಳಿಸಿದೆ.
‘ಮೊದಲು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ತಾವು, ತನಿಖೆಗೆ ಅವಶ್ಯವಿದ್ದರೆ ಹೊಳೆನರಸೀಪುರದ ನಿವಾಸದಲ್ಲಿ ಇರುವುದಾಗಿ ತಿಳಿಸಿದ್ದೀರಿ. ಆದರೆ, ಈ ಹಿಂದೆ ನೀಡಿದ್ದ ನೋಟೀಸ್‌ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
‘ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ಒಳಗೆ ವಿಚಾರಣೆಗೆ ಬರುತ್ತೇವೆ. ಆ ಸಂದರ್ಭದಲ್ಲಿ ನೀವು ಮನೆಯಲ್ಲಿ ಖುದ್ದು ಹಾಜರಿರಬೇಕು’ ಎಂದು ಎಸ್ಐಟಿ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೀಡಿರುವ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.
ಹಾಸನ ಸಂಸದ, ಮತ್ತು ತಮ್ಮ ಮಗ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿನ ಸಂತ್ರಸ್ತ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಎಚ್‌ಡಿ ರೇವಣ್ಣ ಅವರನ್ನು ಏಪ್ರಿಲ್ 29 ರಂದು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು ರೇವಣ್ಣ ಮತ್ತು ಅವರ ಪುತ್ರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮನೆ ಕೆಲಸದಾಕೆಯ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಈಮಧ್ಯೆ, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು 24 ಗಂಟೆಗಳ ಒಳಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಬಂಧಿಸಿರುವ ಹಿನ್ನೆಲೆಯಲ್ಲಿ ಅವರು ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅನೂರ್ಜಿತಗೊಳಿಸುವ ನಿರೀಕ್ಷೆಯಿದೆ.
ಮೈಸೂರಿನ ಕೆಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಜಾಮೀನು ಪ್ರಶ್ನಿಸಿ ಎಸ್ಐಟಿ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಎಸ್‌ಐಟಿ ಪ್ರಕಾರ, ಈ ತನಿಖೆ ಮುಗಿಯುವವರೆಗೆ ರೇವಣ್ಣ ಕಸ್ಟಡಿಯಲ್ಲಿ ಮುಂದುವರಿಯಬೇಕು. ಹೀಗಾಗಿ ಜಾಮೀನು ರದ್ದುಗೊಳಿಸುವಂತೆ ಎಸ್‌ಐಟಿ ಹೈಕೋರ್ಟ್‌ಗೆ ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



