ರಾಜ್ಯ

ಸಿಎಂ, ಡಿಸಿಎಂ ಬೆಂಗಳೂರು ರೌಂಡ್ಸ್; ರಾಹುಲ್ ಗಾಂಧಿ ವಿರುದ್ಧ JDS ದೂರು; BJP ಶಾಸಕ ಹರೀಶ್ ಪೂಂಜಾಗೆ ನೋಟಿಸ್! ಇಂದಿನ ಸುದ್ದಿ ಮುಖ್ಯಾಂಶಗಳು 22-05-2024

ಸಿಎಂ, ಡಿಸಿಎಂ ಬೆಂಗಳೂರು ರೌಂಡ್ಸ್; ರಾಹುಲ್ ಗಾಂಧಿ ವಿರುದ್ಧ JDS ದೂರು; BJP ಶಾಸಕ ಹರೀಶ್ ಪೂಂಜಾಗೆ ನೋಟಿಸ್! ಇಂದಿನ ಸುದ್ದಿ ಮುಖ್ಯಾಂಶಗಳು 22-05-2024
Published On :

1. ಸಿಎಂ. ಡಿಸಿಎಂ ಬೆಂಗಳೂರು ರೌಂಡ್ಸ್

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದ್ದು ಸತತ ಒಂದು ಗಂಟೆ ಎಡಬಿಡದೆ ಮಳೆ ಸುರಿದರೆ ಬೆಂಗಳೂರಿನ ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ಬೆಂಗಳೂರಿನ ಪರಿಸ್ಥಿತಿ, ಬಿಬಿಎಂಪಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದರು. ಹಲವು ಕಡೆಗಳಲ್ಲಿ ಚರಂಡಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಳೆ ಹಾನಿ ವೀಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲು ಇಂದು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ ಮಾಡುತ್ತಿದ್ದೇವೆ. ಕೆಲವು ಜಾಗ ಆಯ್ಕೆ ಮಾಡಿದ್ದೇವೆ. ಎಲ್ಲೆಲ್ಲಿ ರಿಪೋರ್ಟ್ ಬಂದಿದೆ ಅಲ್ಲಿಗೆ ಭೇಟಿ ನೀಡುತ್ತಿದ್ದೇವೆ. ಆಡಳಿತವನ್ನು ಚುರುಕುಗೊಳಿಸಲು ಈ ಕ್ರಮ ಕೈಗೊಂಡಿದ್ದೇವೆ ಎಂದರು.

2. ರೇವ್ ಪಾರ್ಟಿ ಪ್ರಕರಣ ತನಿಖೆ ಸಿಸಿಬಿಗೆ ವರ್ಗಾವಣೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಪ್ರಕರಣ ತನಿಖೆಯನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಡಿಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸದ್ಯ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಇನ್ಸ್ಪೆಕ್ಟರ್ ಲಕ್ಷ್ಮೀ ಪ್ರಸಾದ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ರೇವ್ ಪಾರ್ಟಿಯಲ್ಲಿ ತೆಲುಗಿನ ನಟಿಯರು ಮಾಡೆಲ್ ಗಳು ಭಾಗಿಯಾಗಿದ್ದರು. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಮಾತ್ರ ಅಲ್ಲ ಸೆಕ್ಸ್ ಸಹ ಇತ್ತು ಎಂಬ ಶಾಕಿಂಗ್ ಮಾಹಿತಿಯೂ ತಿಳಿದುಬಂದಿದೆ.

3. ಬೆಳಗಾವಿ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಜನ ಅಸ್ವಸ್ಥ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಜನ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಭೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಅನ್ನ ಪ್ರಸಾದ ಮತ್ತು‌ ಮಾವಿನ ಹಣ್ಣಿನ ಸೀಕರಣೆಯನ್ನು ಗ್ರಾಮಸ್ಥರು ಸೇವಿಸಿದ್ದರು. ಆದರೆ, ಪ್ರಸಾದ ಸೇವಿಸಿದ ಜನರಲ್ಲಿ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಅಸ್ವಸ್ಥರನ್ನು ಕೂಡಲೇ ಸ್ಥಳೀಯ ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ವಿಶ್ವಾಸ್ ವೈದ್ಯ ಆಸ್ಪತ್ರೆಗೆ ದೌಡಾಯಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸದ್ಯ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ತೀವ್ರ ಅಸ್ವಸ್ಥಗೊಂಡ ಐವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

4. ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

ಮೈಸೂರಿನ ಯರಗನಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕುಮಾರಸ್ವಾಮಿ, ಮಂಜುಳಾ, ಅರ್ಚನಾ ಮತ್ತು ಸ್ವಾತಿ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಸಿಲಿಂಡರ್‌ ಸೋರಿಕೆಯಿಂದ ಈ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರಬಹುದೆಂಬ ಶಂಕಿಸಲಾಗಿದೆ. ಕಳೆದ ಎರಡು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ. ಕಾಲೇಜಿಗೆ ಬಾರದಿದ್ದ ಕಾರಣ ಸ್ನೇಹಿತರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

5. ರಾಹುಲ್ ಗಾಂಧಿ ವಿರುದ್ಧ JDS ದೂರು

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜೆಡಿಎಸ್ ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದೆ. ಮಾಜಿ ಎಂಎಲ್‌ಸಿ ಮತ್ತು ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಎಚ್‌ಎಂ ರಮೇಶ್ ಗೌಡ ಅವರು ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 202ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿದ್ದಾರೆ. ಮೇ 2ರಂದು ಶಿವಮೊಗ್ಗ ಮತ್ತು ರಾಯಚೂರು ಜಿಲ್ಲಾ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.

6. ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ನೋಟಿಸ್

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ಇಲ್ಲದೇ ಹೇಗೆ ವಿಚಾರಣೆಗೆ ಹಾಜರಾಗಬೇಕೆಂದು ಶಾಸಕ ಹರೀಶ್ ಪೂಂಜಾ ಹಾಗೂ ಅವರ ಪರ ವಕೀಲ ಪ್ರಶ್ನಿಸಿದ್ದರು. ಹೀಗಾಗಿ ಇದೀಗ ಪೊಲೀಸರು ಹರೀಶ್ ಪೂಂಜಾಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು ಸಬ್ ಇನ್ಸ್​ಪೆಕ್ಟರ್ ನಂದಕುಮಾರ್ ಪೂಂಜಾಗೆ ನೋಟಿಸ್ ನೀಡಿ ನೀಡಿದ್ದು, ತನಿಖಾಧಿಕಾರಿಗಳ ಜೊತೆ ಠಾಣೆಗೆ ಬರುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.