ರಾಜ್ಯ

ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಪೊಲೀಸ್ ವಶಕ್ಕೆ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಪೊಲೀಸ್ ವಶಕ್ಕೆ
ದೇವರಾಜೇಗೌಡ ಪೊಲೀಸ್ ವಶಕ್ಕೆ
Published On :

ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ರದುರ್ಗ ಬಳಿಯ ಕೆ.ಆರ್. ಹಳ್ಳಿ ಗೇಟ್ ಬಳಿ ಹಿರಿಯೂರು ಗ್ರಾಮಾಂತರ ಪೊಲೀಸರು ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಹೊಳೆ ನರಸೀಪುರ ಠಾಣೆಯಲ್ಲಿ ವಿರುದ್ಧ ದಾಖಲಾಗಿದ್ದ ಎರಡು ಕೇಸ್ ಗಳ ಸಂಬಂಧ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಂದು ರಾತ್ರಿ ಅವರನ್ನು ಹೊಳೆ ನರಸೀಪುರ ಠಾಣೆಗೆ ಕರೆತರಲು ಪಿಎಸ್ ಐ ಅಜಯ್ ನೇತೃತ್ವದ ತಂಡ ತೆರಳಿದೆ.

ವಕೀಲರಾಗಿರುವ ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡರು, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ ಮತ್ತು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ದೇವರಾಜೇಗೌಡ, ಲೈಂಗಿಕ ಕಿರುಕುಳದ ವೀಡಿಯೊಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.

ಹಾಸನ ಜಿಲ್ಲೆಯ 36 ವರ್ಷದ ಮಹಿಳೆಯೊಬ್ಬರು ತಮ್ಮ ಆಸ್ತಿ ಮಾರಾಟಕ್ಕೆ ಸಹಾಯ ಮಾಡುವ ನೆಪದಲ್ಲಿ ದೇವರಾಜೇಗೌಡ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವೀಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ. ವೀಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಮಹಿಳೆ‌ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯೆಗೆ ಬಿಜೆಪಿ ನಾಯಕರು ಲಭ್ಯವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.