#SexScandal: ಪ್ರಜ್ವಲ್ ವಿರುದ್ಧ SIT ಲುಕ್ಔಟ್ ನೋಟಿಸ್; ಪ್ರಜ್ವಲ್ ರೇವಣ್ಣ #MassRapist ರಾಹುಲ್ ಗಾಂಧಿ ಆರೋಪ! ಈ ದಿನದ ಸುದ್ದಿ ಮುಖ್ಯಾಂಶಗಳು 02-05-24

1. ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳಿಂದ ಲುಕ್‌ಔಟ್ ನೋಟಿಸ್
ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯಾಗಿರುವ ಮತ್ತು ದೇಶ ಬಿಟ್ಟು ಹೋಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳು ಇಂದು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಸಂಸದ ಪ್ರಜ್ವಲ್ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಸಂಬಂಧ HD ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ಈಗಾಗಲೇ ದೂರು ದಾಖಲಿಸಿದ್ದಾರೆ. ಈಮಧ್ಯೆ, ಸಂತ್ರಸ್ತ ಮಹಿಳೆಯನ್ನು ಇಂದು ಎಸ್ಐಟಿ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿದರು. ನ್ಯಾಯಾಧೀಶರ ಮುಂದೆ 164ರ ಅಡಿಯಲ್ಲಿ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಎಸ್ಐಟಿ ಅಧಿಕಾರಿಗಳು ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಮತ್ತೊಂದೆಡೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಹೆಚ್ ಡಿ ರೇವಣ್ಣ ಇಂದು ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
2. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್: ರಾಹುಲ್ ಗಾಂಧಿ
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಈಮಧ್ಯೆ, ಶಿವಮೊಗ್ಗದಲ್ಲಿ ಇಂದು ಚುನಾವಣಾ ಪ್ರಚಾರ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರ ವೀಡಿಯೋಗಳನ್ನು ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ ಎಂದು ಬಿಜೆಪಿಗೆ ಗೊತ್ತಿತ್ತು. ಆದರೂ ಅವರ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
3. ನರೇಂದ್ರ ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ: ಕೆಎಸ್ ಈಶ್ವರಪ್ಪ
ನರೇಂದ್ರ ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದ್ದು, ದೂರು ನೀಡಿದ್ದವರಿಗೆ ಮುಖಭಂಗವಾಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನರೇಂದ್ರ ಮೋದಿ ಫೋಟೋ ಬಳಸಬಾರದು ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಈಗ ಮೋದಿಯವರ ಫೋಟೋ ಬಳಕೆಗೆ ನನಗೆ ಅಧಿಕಾರ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜೀವನ ಪೂರ್ತಿ ಅವರ ಫೋಟೋ ಬಳಸುತ್ತೇನೆ. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದರು.
4. ವಿವಾದಾತ್ಮಕ ಹೇಳಿಕೆ: ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ನೋಟಿಸ್
ಪ್ರಧಾನಿ ನರೇಂದ್ರ ಮೋದಿ ಸತ್ತರೆ, ಬೇರೆ ಯಾರು ಪ್ರಧಾನಿಯಾಗುವುದಿಲ್ಲವೇ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಲೀಡ್ ಕೊಡದಿದ್ದರೆ ವಿದ್ಯುತ್ ಕಡಿತ ಮಾಡುವುದಾಗಿ ಮತದಾರರಿಗೆ ಬೆದರಿಕೆ ಹಾಕಿದ್ದ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರಿಗೆ ಚಿಕ್ಕೋಡಿ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ಶಿಂಧೆ ನೀತಿ ಸಂಹಿತೆ ಉಲ್ಲಂಘನೆಯಡಿ ನೋಟಿಸ್ ನೀಡಿದ್ದಾರೆ. 24 ಗಂಟೆಯೊಳಗೆ ಈ ಎರಡು ವಿವಾದಾಸ್ಪದ ಹೇಳಿಕೆ ಉತ್ತರ ನೀಡಬೇಕು ಎಂದು ಕಾಗಾವಾಡ ವಿಧಾನಸಭಾ ಮತ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ.
5. ಸಂಗಮೇಶ ಎಂಬುವರ ಮನೆಗೆ ನುಗ್ಗಿ ಹಲ್ಲೆ: ಸಿಐಡಿಗೆ ನೀಡಲು ತೀರ್ಮಾನ
ಕಲಬುರಗಿ-ಜೇವರ್ಗಿ ರಸ್ತೆಯಲ್ಲಿನ ಕೋಟನೂರು(ಡಿ) ಪ್ರದೇಶದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದಲ್ಲಿನ ಆರೋಪಿ ಸಂಗಮೇಶ ಎಂಬುವರ ಮನೆಗೆ ನುಗ್ಗಿದ ಗುಂಪೊಂದು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕುಟುಂಬ ಸದಸ್ಯರು, ಬೆಂಬಲಿಗರು ಹಾಗೂ ವೀರಶೈವ-ಲಿಂಗಾಯಿತ ಸಮಾಜ ಮುಖಂಡರು ಸೇರಿ ನಿನ್ನೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸಂಪೂರ್ಣ ಸತ್ಯಾಂಶ ಹೊರಬರಬೇಕು ಎಂದು ಸಿಐಡಿಗೆ ನೀಡಲು ತೀರ್ಮಾನ ಮಾಡಿದ್ದೇವೆ. ಬಿಜೆಪಿಯವರು ಇದನ್ನ ರಾಜಕೀಯ ಅಸ್ತ್ರ ಮಾಡಿಕೊಳ್ಳೊಕೆ ಬಿಡೋದಿಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


