ರಾಮೇಶ್ವರಂ ಕೆಫೆ ಸ್ಫೋಟ: ವ್ಯಕ್ತಿಯ ಚಹರೆ ಸಿಕ್ಕಿದೆ, ಆದಷ್ಟು ಬೇಗ ಆರೋಪಿಯ ಬಂಧನ; ಸಿಎಂ ವಿಶ್ವಾಸ
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಇನ್ನೂ ಎಫ್ಎಸ್ಎಲ್ ವರದಿ ಬಂದಿಲ್ಲ

ಮೈಸೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಚಹರೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೋಪಿ ಮಾಸ್ಕ್, ಟೋಪಿ ಹಾಕಿಕೊಂಡು ಬಂದು ರಾಮೇಶ್ವರ ಕೆಫೆಯೊಳಗೆ ಬಂದು ತಿಂಡಿ ತಿಂದಿದ್ದಾನೆ. ಬಸ್ನಿಂದ ಇಳಿದು ಹೋಟೆಲ್ಗೆ ಹೋಗಿದ್ದಾನೆ. ಬಸ್ನಿಂದ ಇಳಿದು ಹೋಗಿರುವ ದೃಶ್ಯಾವಳಿಗಳು ಪತ್ತೆಯಾಗಿವೆ. ಆರೋಪಿ ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡು ಬಂದಿದ್ದನು. ಟೋಪಿ ಹಾಕಿಕೊಂಡು ಬಂದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡಿದ್ದಾನೆ. ನಂತರ ಹೋಟೆಲ್ನಲ್ಲಿ ಕುಳಿತು ಟೈಮರ್ ಫಿಕ್ಸ್ ಮಾಡಿದ್ದಾನೆ. ಟೈಮರ್ ಫಿಕ್ಸ್ ಮಾಡಿ ಇಟ್ಟು ಹೋಟೆಲ್ನಿಂದ ಹೊರಹೋಗಿದ್ದಾನೆ. ಬಳಿಕ ಬ್ಲಾಸ್ಟ್ ಆಗಿದೆ ಎಂದರು.
ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಓರ್ವ ವ್ಯಕ್ತಿಯ ಕೃತ್ಯವಾ ಅಥವಾ ಸಂಘಟನೆಯ ಕೃತ್ಯವೇ ಎಂದು ಇನ್ನೂ ಗೊತ್ತಾಗಿಲ್ಲ. ಭಯೋತ್ಪಾದಕ ಕೃತ್ಯನಾ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.
2022 ರ ಮಂಗಳೂರು ಪ್ರೆಶರ್ ಕುಕ್ಕರ್ ಸ್ಫೋಟ ಮತ್ತು ಶುಕ್ರವಾರದ ಘಟನೆಯ ನಡುವೆ ಸಾಮ್ಯತೆಗಳನ್ನು ಸೂಚಿಸುವ ಕೆಲವು ವರದಿಗಳ ಕುರಿತು ಕೇಳಲಾದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ತೀವ್ರವಾದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಎಫ್ಎಸ್ಎಲ್ ವರದಿ ಬಂದಿಲ್ಲ: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಇನ್ನೂ ಎಫ್ಎಸ್ಎಲ್ ವರದಿ ಬಂದಿಲ್ಲ. ತಪ್ಪು ಸಾಬೀತಾದರೆ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ವರದಿ ಬರದೆ ಆರೋಪಗಳಿಗೆ ಏನೂ ಉತ್ತರ ಕೊಡಲಿ ಎಂದು ಕೇಳಿದರು.
ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣದಿಂದ ಇಂತಹ ಘಟನೆಗಳು ನಡೆಯುತ್ತವೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಿಎಂ, ಬಿಜೆಪಿ ಆಡಳಿತ ಕಾಲದಲ್ಲಿ ಆದ ಬಾಂಬ್ ಬ್ಲಾಸ್ಟ್ಗಳಿಗೆ ಏನು ಕಾರಣ? ಅದು ಅಲ್ಪಸಂಖ್ಯಾತರ ತುಷ್ಟೀಕರಣವಾ? ಬಿಜೆಪಿ ರಾಜಕೀಯಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದೆ. ಅಲ್ಪಸಂಖ್ಯಾತರಿಗೂ ಇದಕ್ಕೂ ಏನು ಸಂಬಂಧ? ಬಿಜೆಪಿ ಇದನ್ನು ರಾಜಕೀಯ ಮಾಡುತ್ತಿದೆ ಅಷ್ಟೆ. ಈ ವಿಚಾರದಲ್ಲಿ ರಾಜಕೀಯ ಯಾರು ಮಾಡಬಾರದು, ನಾಗರಿಕರ ರಕ್ಷಣೆ ವಿಚಾರವಿದು ಎಂದು ಕೇಳಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



