ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಚರ್ಚೆ
ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಎನ್.ಹೆಚ್.ಎ.ಐಗೆ ಅನುದಾನ ನೀಡುವಂತೆ ಪ್ರಧಾನಿಗೆ ಸಿಎಂ ಮನವಿ ಮಾಡಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಂಜೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪ್ರಮುಖ ನೀರಾವರಿ ಯೋಜನೆಗಳು ಸೇರಿದಂತೆ ಕರ್ನಾಟಕದ ಬಾಕಿ ಉಳಿದಿರುವ ಮೂಲಸೌಕರ್ಯ ಯೋಜನೆಗಳಿಗಾಗಿ ಮನವಿ ಮಾಡಿದರು.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಹಾಗೂ 400 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಅಣೆಕಟ್ಟು ಯೋಜನೆಯ 9000 ಕೋಟಿ ರೂ.ಗಳ ಡಿಪಿಆರ್ಗೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಬಾಕಿ ಇದೆ. ಮೇಕೆದಾಟು ಯೋಜನೆಗೆ ಪ್ರಧಾನಿ ಅವರು ಖುದ್ದಾಗಿ ಆಸಕ್ತಿ ವಹಿಸುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024ನಲ್ಲಿ ಘೋಷಿಸಿದಂತೆ 5,300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹಾದಾಯಿ ಯೋಜನೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.
ಬೆಂಗಳೂರು ಸುರಂಗ ಮಾರ್ಗಕ್ಕೆ ನೆರವಿಗೆ ಮನವಿ: ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ ಸುರಂಗ ಮಾರ್ಗಕ್ಕೆ 3,000 ಕೋಟಿ ವೆಚ್ಚವಾಗಲಿದ್ದು, ಯೋಜನೆಯಿಂದ ಹಲವಾರು ಲಾಭಗಳಿವೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ 7ಅನ್ನು ರಾ.ಹೆ.4ಕ್ಕೆ ಸಂಪರ್ಕಿಸುವುದರಿಂದ ಕರ್ನಾಟಕ ಸರ್ಕಾರ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೊಳ್ಳಬಹುದಾಗಿದೆ. ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಎನ್.ಹೆಚ್.ಎ.ಐಗೆ ಅನುದಾನ ನೀಡುವಂತೆ ಪ್ರಧಾನಿಗೆ ಸಿಎಂ ಮನವಿ ಮಾಡಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಬೇಡಿಕೆ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3 ನೇ ಹಂತದ 44.65 ಕಿಮೀಗಳನ್ನು 15,611 ಕೋಟಿಗಳ ವೆಚ್ಚದ ಡಿಪಿಆರ್ನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಆದಷ್ಟು ಶೀಘ್ರವಾಗಿ ಅನುಮೋದನೆ ನೀಡಬೇಕು. 73.04 ಕಿ.ಮೀ ಉದ್ದದ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಅನುಮೋದಿಸಿದೆ. ಕೇಂದ್ರ ಬಜೆಟ್ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡುವಂತೆ ಸಿಎಂ ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ.
15ನೇ ಹಣಕಾಸು ಆಯೋಗವು 2021-26ರ ಅವಧಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪೇರಿಫೆರಲ್ ರಿಂಗ್ ರೋಡ್ ಗಾಗಿ ಶಿಫಾರಸ್ಸು ಮಾಡಿರುವ 6000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು. ಬಿಬಿಎಂಪಿ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಗಾಗಿ 3200 ಕೋಟಿ ಅಂದಾಜು ಮೊತ್ತದ ಯೋಜನೆ ಕೈಗೊಳ್ಳುತ್ತಿದ್ದು, ಯೋಜನೆಯ ಶೇ.30 ಅಂದರೆ 960 ಕೋಟಿ ರೂ.ಗಳನ್ನು ಸ್ವಚ್ಛ ಭಾರತ ಅಭಿಯಾನ 2.0ದಡಿ ಕಾರ್ಯಸಾಧ್ಯಾತಾ ಅಂತರ ನಿಧಿ ಒದಗಿಸಲು ಕೋರಲಾಗಿದೆ.
ಕಲ್ಯಾಣ ಕರ್ನಾಟಕದ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 3,000 ಕೋಟಿ ರೂ.ಗಳ ಅನುದಾನವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದು ಕೇಂದ್ರ ಸರ್ಕಾರವು ತನ್ನ 2024-25ರ ಬಜೆಟ್ ನಲ್ಲಿ ಅನುರೂಪದ ಅನುದಾನ ವನ್ನು ಒದಗಿಸಲು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮದಡಿ ಒದಗಿಸುವ ಅನುದಾನವನ್ನು ಹೆಚ್ಚಿಸಲು ಮತ್ತು ಹೊಸ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಧನಸಹಾಯ ನೀಡುವಂತೆ ಮನವಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ (AIIMS) ಘೋಷಿಸುವಂತೆ ಮುಖ್ಯಮಂತ್ರಿಗಳು ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ. 15ನೇ ಹಣಕಾಸು ಆಯೋಗವು 2020-21ರಲ್ಲಿ ಶಿಫಾರಸ್ಸು ಮಾಡಿದ್ದ 5,495 ಕೋಟಿಗಳ ನಿರ್ದಿಷ್ಟ ಅನುದಾನವನ್ನು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಮೊತ್ತದ ಪಾಲು ದೊರಲಿಲ್ಲವಾದ್ದರಿಂದ ಈ ಶಿಫಾರಸ್ಸನ್ನು ಒಪ್ಪಿ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



