ಎತ್ತಿನಹೊಳೆ ಯೋಜನೆ: 500 ಎಕರೆ ಭೂಮಿ ನೀಡಲು ಅರಣ್ಯ ಇಲಾಖೆ ಒಪ್ಪಿಗೆ- ಡಿಸಿಎಂ ಡಿ.ಕೆ.ಶಿವಕುಮಾರ್
ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು 500 ಎಕರೆ ಭೂಮಿ ನೀಡಲು ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.

ಬೆಂಗಳೂರು: ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು 500 ಎಕರೆ ಭೂಮಿ ನೀಡಲು ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.
ಶಿವಕುಮಾರ್ ಅವರು, ಗುರುವಾರ ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಸಮನ್ವಯ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರೊಂಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ತ್ವರಿತ ಗತಿಯಲ್ಲಿ ನಡೆಸಲು ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ, ಕಂದಾಯ, ಅರಣ್ಯ, ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಇಂದು ಚರ್ಚೆ ಮಾಡಿದ್ದೇವೆ.
ಯೋಜನೆಗೆ ಅಗತ್ಯವಿರುವ ಜಾಗವನ್ನು ಅರಣ್ಯ ಇಲಾಖೆ ನೀಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ 500 ಎಕರೆ ಜಾಗ ನೀಡಲಿದೆ. ಈ ಪ್ರಕ್ರಿಯೆಯನ್ನು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಳಿಸುತ್ತೇವೆ. ಈ ಯೋಜನೆಗಳ ಕಾಮಗಾರಿಗೆ ಎದುರಾಗಿರುವ ಸಮಸ್ಯೆಗಳನ್ನು ಅಧಿಕಾರಿಗಳು ಗುರುತಿಸಿದ್ದು, ಅವುಗಳಿಗೆ ಪರಿಹಾರ ಹುಡುಕಲು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಹೇಳಿದರು.
260 ಕಿ.ಮೀ ಉದ್ಧದ 20 ಸ್ಥಳಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇವೆ. ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದ ಕಾರಣ, ನಮ್ಮ ಅರಣ್ಯ ಸಚಿವರು ಹಾಗೂ ಇಲಾಖೆ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಈ ವಿಚಾರವಾಗಿ ಕಂದಾಯ, ನೀರಾವರಿ ಹಾಗೂ ಅರಣ್ಯ ಇಲಾಖೆ ಸೇರಿ ಒಟ್ಟಾಗಿ ಜಂಟಿ ಸರ್ವೇ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿದೆ. ಕೂಡಲೇ ಈ ಕಾಮಗಾರಿ ನಡೆಸಲು ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಮಧ್ಯೆ ಕೆಲವು ಜಾಗದಲ್ಲಿ ರೈತರಿಗೆ 51 ಕೋಟಿ ನೀಡಬೇಕಾಗಿದೆ. ಈ ಪೈಕಿ 10 ಕೋಟಿ ಹಣ ನೀಡಲಾಗಿದ್ದು, 41 ಕೋಟಿ ಬಾಕಿ ಇದೆ. ಈ ಜಾಗದ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಗೊಂದಲವಿದೆ. ಹೀಗಾಗಿ ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.
ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಬಳಿ ಸಮತೋಲಿತ ಜಲಾನಯನ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದ್ದು, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಮುಂದಿನ ತಿಂಗಳೊಳಗೆ ನೀರು ಬಿಡುವಂತೆ ನಿರ್ದೇಶನ ನೀಡಲಾಗಿದೆ. ಮೊದಲ ಹಂತದಲ್ಲಿ 48 ಕಿ.ಮೀ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ವ್ಯರ್ಥವಾಗಿ ಹೋಗುತ್ತಿರುವ ನೀರು ಮತ್ತು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅಧ್ಯಯನ ಮಾಡಲು ಹೈಪವರ್ ಕಮಿಟಿಯನ್ನು ಸ್ಥಾಪಿಸಲು ಚಿಂತನ ನಡೆಸಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



