POCSO Case: BSYಗೆ ಬಂಧನ ಭೀತಿ; ಸದ್ಯಕ್ಕೆ ಚಿತ್ರರಂಗದಿಂದ Darshan ಬ್ಯಾನ್ ಮಾಡಲ್ಲ; ದಿಢೀರ್ ತನಿಖಾಧಿಕಾರಿ ಬದಲಾವಣೆ! ಇಂದಿನ ಪ್ರಮುಖ ಸುದ್ದಿಗಳು 13-06-24

1. ಪೊಕ್ಸೋ ಪ್ರಕರಣ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಬಂಧನ ಭೀತಿ
ಪೊಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ಯಡಿಯೂರಪ್ಪ ಅವರನ್ನು ಸಿಐಡಿ ಬಂಧಿಸುವ ಸಾಧ್ಯತೆ ಇದೆ. ಪೋಕ್ಸೋ 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ನ ನ್ಯಾಯಾಧೀಶರಾದ ರಮೇಶ್ ಅವರು ಬಿಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಜೂನ್ 15ರೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕಿದೆ. ಹೀಗಾಗಿ ಯಡಿಯೂರಪ್ಪಗೆ ವಿಚಾರಣೆಗೆ ಬರುವಂತೆ ನಿನ್ನೆ ಸಿಐಡಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ವಿಚಾರಣೆಗೆ ಬಿಎಸ್ ಯಡಿಯೂರಪ್ಪ ಗೈರಾಗಿದ್ದರು. ಈ ಹಿನ್ನೆಲೆ ಪೊಲೀಸರು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಮನವಿ ಮಾಡಿದ್ದರು.
2. ರೇಣುಕಾಸ್ವಾಮಿ ಕೊಲೆ: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಪರದೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಮತ್ತಿತರ 12 ಆರೋಪಿಗಳ ವಿಚಾರಣೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ. ಈಮಧ್ಯೆ, ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಠಾಣೆ ಮುಂದೆ ಜಮಾಯಿಸಿ, ಘೋಷಣೆ ಕೂಗಿದ್ದರಿಂದ ತನಿಖೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಕಾರಣ ಠಾಣೆಯನ್ನು ಶಾಮಿಯಾನ ಹಾಕಿ ಮುಚ್ಚಲಾಗಿದ್ದು ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇನ್ನು ದರ್ಶನ್ ಗೆ ವಿಶೇಷ ಸೌಲಭ್ಯ ಕಲ್ಪಿಸಲು ಠಾಣೆಗೆ ಶಾಮಿಯಾನ ಹಾಕಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ದರ್ಶನ್ ಗೆ ಯಾವುದೇ ವಿಶೇಷ ಸೌಲಭ್ಯ ಕಲ್ಪಿಸಲಾಗಿಲ್ಲ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಅವರ ಅನುಕೂಲಕ್ಕಾಗಿ ಶಾಮಿಯಾನ ಹಾಕಲಾಗಿದೆ ಎಂದರು. ಇದೇ ವೇಳೆ ಪೊಲೀಸ್ ಠಾಣೆಯನ್ನು ಶಾಮಿಯಾನ ಹಾಕಿ ಮುಚ್ಚುವುದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶಗಳೂ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
3. ರೇಣುಕಾಸ್ವಾಮಿ ಕೊಲೆ: ದಿಧೀರ್ ತನಿಖಾಧಿಕಾರಿ ಬದಲಾವಣೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮಹತ್ವದ ತನಿಖೆ ಮಧ್ಯೆ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ಆರೋಪಿಗಳನ್ನು ಕೊಲೆ ನಡೆದ ಜಾಗದಲ್ಲೂ ನಿನ್ನೆ ಸ್ಥಳ ಮಹಜರು ನಡೆಸಿದ್ದರು. ಆದರೆ ಇಂದು ಪ್ರಕರಣದ ಆರಂಭದಿಂದಲೂ ತನಿಖೆ ನಡೆಸುತ್ತಿದ್ದ ಕಾಮಾಕ್ಷಿಪಾಳ್ಯದ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಎಂಬುವರನ್ನು ಬದಲಾಯಿಸಲಾಗಿದ್ದು ಅವರ ಜಾಗಕ್ಕೆ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ಅವರನ್ನು ನೇಮಿಸಲಾಗಿದೆ. ಈ ಮಧ್ಯೆ ಶವವನ್ನು ಸುಮನಹಳ್ಳಿ ಸೇತುವೆ ಬಳಿಯ ಚರಂಡಿಗೆ ಎಸೆಯುವಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಬ್ ಇನ್‌್ವಪೆಕ್ಟರ್ ಹೇಳಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿತ್ತು. ಇದು ಆರೋಪಗಳೆಲ್ಲವೂ ಸುಳ್ಳು ಮತ್ತು ನಿರಾಧಾರ. ನಾವು ಅದನ್ನು ಬುಧವಾರವೇ ಪರಿಶೀಲಿಸಿದ್ದೇವು ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
4. ಸದ್ಯಕ್ಕೆ ಚಿತ್ರರಂಗದಿಂದ ದರ್ಶನ್ ಬ್ಯಾನ್ ಇಲ್ಲ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯ ಹೆಚ್ಚಿದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಫಿಲ್ಮ್ ಚೇಂಬರ್ ತುರ್ತುಸಭೆ ನಡೆಸಿತು. ಸಭೆಯಲ್ಲಿ ದರ್ಶನ್ ಅವರು ಚಿತ್ರರಂಗದಿಂದ ಬಹಿಷ್ಕರಿಸುವ ಯಾವುದೇ ನಿರ್ಧಾರವನ್ನು ಸಭೆ ಕೈಗೊಂಡಿಲ್ಲ. ದರ್ಶನ್ ಕನ್ನಡ ಚಿತ್ರರಂಗದ ದೊಡ್ಡ ನಟ. ಬಹಿಷ್ಕಾರ ಕುರಿತಂತೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ದರ್ಶನ್ ಎಸಗಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ಹೇಳಿದ್ದಾರೆ. ಕೊಲೆ ಆರೋಪ ಸಾಬೀತಾದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು. ಅಲ್ಲದೆ, ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ನಾಳೆ ಫಿಲ್ಮ್ ಚೇಂಬರ್ ನ ಪದಾಧಿಕಾರಿಗಳು ಚಿತ್ರದುರ್ಗಕ್ಕೆ ತೆರಳುವರು ಎಂದು ತಿಳಿಸಿದರು.
5. ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು
ಮೈಸೂರಿನ ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ದೇವಸ್ಥಾನದ ಬಳಿ ಇಬ್ಬರು ಯುವಕರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಬೆಂಗಳೂರು ಮತ್ತು ತಮಿಳುನಾಡು ನಿವಾಸಿಗಳಾದ ವಿಶಾಲ್ ಮತ್ತು ರೋಹನ್ ಎಂದು ತಿಳಿದುಬಂದಿದೆ. ನಿಮಿಷಾಂಬ ದೇವಿ ದೇವಸ್ಥಾನದ ಪಕ್ಕದಲ್ಲಿ ಕಾವೇರಿ ನದಿ ಹರಿಯುವುದನ್ನು ನೋಡಿ, ಸ್ನಾನ ಮಾಡಲು ನಿರ್ಧರಿಸಿದರು. ಮುಂಗಾರು ಮಳೆಯಿಂದಾಗಿ ನದಿಯ ಹರಿವು ಹೆಚ್ಚಾಗಿದೆ. ಈಜು ಗೊತ್ತಿಲ್ಲದಿದ್ದರೂ ಆಳದ ನೀರಿಗೆ ಇಳಿದು ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


