ಸಚಿವ ಬಿ.ನಾಗೇಂದ್ರ ರಾಜಿನಾಮೆ; 3 ಪಕ್ಷಗಳ ಎಲ್ಲಾ 11 ಸದಸ್ಯರು ಪರಿಷತ್ ಗೆ ಅವಿರೋಧ ಆಯ್ಕೆ; ಉತ್ತರಾಖಂಡಕ್ಕೆ ಚಾರಣಕ್ಕೆ ಹೋಗಿದ್ದ 9 ಕನ್ನಡಿಗರು ಸಾವು! ಇಂದಿನ ಸುದ್ದಿ ಮುಖ್ಯಾಂಶಗಳು 06-06-24

1. ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಬಿ. ನಾಗೇಂದ್ರ ರಾಜೀನಾಮೆ
ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದ್ದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಪ್ರಕರಣದಲ್ಲಿ ಎಲ್ಲೂ ನನ್ನ ಹೆಸರು ಉಲ್ಲೇಖ ಮಾಡಿಲ್ಲ. ಬೇರೆಯವರ ಒತ್ತಡದಿಂದ ನಾನು ರಾಜೀನಾಮೆ ಕೊಡುತ್ತಿಲ್ಲ. ನಿನ್ನ ರಾಜೀನಾಮೆ ಅಗತ್ಯವಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು. ಆದರೂ ನಾನೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನಾನು ನಿರ್ದೋಷಿಯಾಗಿ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಿದರು.
2. ವಿಧಾನಪರಿಷತ್ ಗೆ ಒಟ್ಟು11 ಸದಸ್ಯರು ಅವಿರೋಧವಾಗಿ ಆಯ್ಕೆ
ಕರ್ನಾಟಕ ವಿಧಾನಪರಿಷತ್ ಗೆ ಒಟ್ಟು11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ 7, ಬಿಜೆಪಿಯಿಂದ 3, ಜೆಡಿಎಸ್‌ನ ಓರ್ವ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಇಂದು ಅಧಿಕೃತವಾಗಿ ಘೋಷಣೆ ಮಾಡಿದರು. ಒಟ್ಟು 11 ವಿಧಾನ ಪರಿಷತ್ ಸ್ಥಾನಗಳಲ್ಲಿ ವಿಧಾನಸಭೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ನಿಂದ ಬೋಸರಾಜು, ಐವಾನ್ ಡಿಸೋಜಾ, ವಸಂತ್ ಕುಮಾರ್, ಬಿಲ್ಕೀಸ್ ಬಾನು, ಜಗದೇವ್ ಗುತ್ತೇದಾರ್, ಗೋವಿಂದ್ ರಾಜು, ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಸಿಟ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮೂಳೆ, ಜೆಡಿಎಸ್ನಿಂದ ಹಿರಿಯ ನಾಯಕ ಜವರಾಯಿಗೌಡ ಮೇಲ್ಮನೆ ಪ್ರವೇಶಿಸಿದ್ದಾರೆ.
3. ಉತ್ತರ ಕಾಶಿಯಲ್ಲಿ ಚಾರಣಕ್ಕೆ ಹೋಗಿದ್ದ ಕರ್ನಾಟಕದ 9 ಚಾರಣಿಗರು ಸಾವು
ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆ ಚಾರಣಕ್ಕೆ ಹೋಗಿದ್ದ ಕರ್ನಾಟಕದ 9 ಚಾರಣಿಗರು ಸಾವನ್ನಪ್ಪಿದ್ದಾರೆ. ಚಾರಣಕ್ಕೆ ಹೋಗಿದ್ದ 20 ಕನ್ನಡಿಗರ ಪೈಕಿ 9 ಸಾವನ್ನಪ್ಪಿದ್ದು ಅವರ ಮೃತದೇಹಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕನ್ನಡಿಗರ ರಕ್ಷಣೆ, ಮೃತದೇಹ ತರಲು ಸಚಿವ ಕೃಷ್ಣಬೈರೇಗೌಡ ಉತ್ತರಾಖಂಡಕ್ಕೆ ಭೇಟಿ ನೀಡಿದ್ದು, ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಸಿನ್ಹಾ ಅವರನ್ನು ಭೇಟಿ ಮಾಡಿ, ಮೃತದೇಹಗಳನ್ನು ಬೆಂಗಳೂರಿಗೆ ಸಾಗಿಸಲು ವಿಮಾನದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡರು, ನಾಳೆ ಮೃತದೇಹಗಳನ್ನು ಬೆಂಗಳೂರಿಗೆ ತರಲಾಗುತ್ತದೆ. ಆದರೆ ರಕ್ಷಣೆ ಮಾಡಲಾಗಿರುವ 11 ಚಾರಣಿಗರನ್ನು ಡೆಹ್ರಾಡೂನ್ ಮತ್ತು ಉತ್ತರಕಾಶಿಗೆ ಸ್ಥಳಾಂತರಿಸಲಾಗಿದ್ದು ಇಂದೇ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತದೆ.
4. ಮೈಸೂರಿನ ದಕ್ಷಿಣ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ NDA ಅಭ್ಯರ್ಥಿಗಳು ಗೆಲುವು
ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಆರು ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಮೈಸೂರಿನ ದಕ್ಷಿಣ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕೆ.ವಿವೇಕಾನಂದ 4622 ಮತಗಳ ಅಂತರದಿಂದ ಕಾಂಗ್ರೆಸ್ ನ ಮರಿತಿಬ್ಬೇಗೌಡ ವಿರುದ್ಧ ಗೆದ್ದಿದ್ದರೆ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಭೋಜೇಗೌಡ ಕಾಂಗ್ರೆಸ್ ಅಭ್ಯರ್ಥಿ ಕೆಕೆ ಮಂಜುನಾಥ್ ವಿರುದ್ಧ 5,267 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ನಾಲ್ಕು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
5. ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅವಧಿಯನ್ನು ಕೋರ್ಟ್ ಜೂನ್ 10ರವರೆಗೆ ವಿಸ್ತರಣೆ
ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅವಧಿಯನ್ನು ಕೋರ್ಟ್ ಜೂನ್ 10ರ ವರೆಗೆ ವಿಸ್ತರಿಸಿದೆ. ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಆರೋಪಿಯನ್ನು ಇಂದು ಮಧ್ಯಾಹ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಎಸ್ಐಟಿ ಪರ ವಕೀಲ ಅಶೋಕ್ ನಾಯಕ್ ಮಾಡಿದ ಮನವಿಯನ್ನು ಪುರಸ್ಕರಿಸಿದ 42ನೇ ACMM ಕೋರ್ಟ್ ನ ನಾಯಾಧೀಶ ಕೆ.ಎಂ. ಶಿವಕುಮಾರ್, ಕಸ್ಟಡಿ ಅವಧಿಯನ್ನು ಜೂನ್ 10ರವರೆಗೆ ವಿಸ್ತರಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


