ವಾಲ್ಮೀಕಿ ನಿಗಮ ಹಗರಣ: ತೆಲಂಗಾಣ ಸಹಕಾರ ಬ್ಯಾಂಕ್ ಅಧ್ಯಕ್ಷನ ಬಂಧನ; ಅವ್ಯವಹಾರದಲ್ಲಿ ನೆರೆರಾಜ್ಯದ ನಂಟು ದೃಢ!
ಬಂಧಿತ ವ್ಯಕ್ತಿಯನ್ನು ಸತ್ಯನಾರಾಯಣ ಎಂದು ಗುರ್ತಿಸಲಾಗಿದ್ದು, ಇವರು ಹೈದರಾಬಾದ್ನ ನಲ್ಲಕುಂಟ ಪ್ರದೇಶದಲ್ಲಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕರಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕೋಟ್ಯಾಂತರ ರೂಪಾಯಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ಸಹಕಾರ ಬ್ಯಾಂಕ್ ಅಧ್ಯಕ್ಷರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಮಂಗಳವಾರ ಬಂಧನಕ್ಕೊಳಪಡಿಸಿದ್ದು, ಈ ಮೂಲಕ ಅವ್ಯವಹಾರದಲ್ಲಿ ನೆರೆರಾಜ್ಯದ ನಂಟು ದೃಢವಾದಂತಾಗಿದೆ.
ಬಂಧಿತ ವ್ಯಕ್ತಿಯನ್ನು ಸತ್ಯನಾರಾಯಣ ಎಂದು ಗುರ್ತಿಸಲಾಗಿದ್ದು, ಇವರು ಹೈದರಾಬಾದ್ನ ನಲ್ಲಕುಂಟ ಪ್ರದೇಶದಲ್ಲಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕರಾಗಿದ್ದಾರೆಂದು ತಿಳಿದುಬಂದಿದೆ.
ಬಂಧಿತ ಸತ್ಯನಾರಾಯಣ ಅವರನ್ನು ಮಂಗಳವಾರ ರಾಜ್ಯಕ್ಕೆ ಕರೆತರಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೋರಲಾಗುವುದು ಎಂದು ಮೂಲಗಳು ತಿಳಿಸಿವೆ.
ಸೋಮವಾರ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ ವಸಂತನಗರದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿ, ಹಗರಣಕ್ಕೆ ಸಂಬಂಧಿಸಿದ ಡಿಜಿಟಲ್ ಮತ್ತು ಪೇಪರ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಹಣ ವರ್ಗಾವಣೆಯಾಗಿರುವ 14 ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದು, ತನಿಖೆಗಾಗಿ ತಂಡವನ್ನು ಹೈದರಾಬಾದ್ಗೆ ಕಳುಹಿಸಿದ್ದಾರೆ.
ಮೇ 31 ರಂದು ಬೆಂಗಳೂರು ಹೊರವಲಯದಲ್ಲಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ ಪದ್ಮನಾಭ ಮತ್ತು ಅಕೌಂಟ್ಸ್ ಅಧಿಕಾರಿ ಪರಶುರಾಮ್ ಜಿ ಅವರನ್ನು ಪೊಲೀಸರು ಬಂಧಿಸಿ ಶನಿವಾರ ಮಧ್ಯಾಹ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದದ್ದರು. ನ್ಯಾಯಾಲಯ ಅವರನ್ನು ಜೂನ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದ್ದು, ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.. ಡೆತ್ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಂತೆ ಅವ್ಯಹಾರ ನಡೆದಿದೆ ಎಂದು ಚಂದ್ರಶೇಖರ್ ಅವರು ಬರೆದಿದ್ದಾರೆನ್ನಲಾಗಿದೆ. ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ.
ಈ ನಡುವೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಎಸ್ಟಿ ನಿಗಮದ ಬಹುಕೋಟಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಎಫ್ ಐಆರ್ ದಾಖಲಿಸಿದೆ. ಬ್ಯಾಂಕ್ ಸಿಬಿಐಗೆ ಪತ್ರ ಬರೆದಿತ್ತು. 3 ಕೋಟಿಗೂ ಹೆಚ್ಚು ಹಗರಣ ನಡೆದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬಹುದು ಎಂಬ ಕಾನೂನು ಇದೆ. ಅದರಂತೆ ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದರು.
ಐವರು ಅಧಿಕಾರಿಗಳ ವಿರುದ್ಧ FIR ದಾಖಲು
ಈ ನಡುವೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಯೂನಿಯನ್ ಬ್ಯಾಂಕ್ ಹಿರಿಯ ಅಧಿಕಾರಿಗಳ ಪತ್ರದ ಅನ್ವಯ ಬ್ಯಾಂಕಿನ ಮೂವರು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಪೂರ್ವ ವಲಯದ ಡಿಜಿಎಂ ಜೆ. ಮಹೇಶ್ ಎಂಬುವವರು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಪ್ರಕರಣ ವಿಶೇಷ ತನಿಖಾ ತಂಡ ಸಿಬಿಐಗೆ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ರಾಜ್ಯ ಸರ್ಕಾರ ತನಿಖೆಯನ್ನು ಎಸ್ಐಟಿಯಿಂದ ವರ್ಗಾವಣೆ ಮಾಡಲು ನಿರಾಕರಿಸಿದ್ದೆ ಆದರೆ, ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಇದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


