ರಾಜ್ಯ

NDAಗೆ ಸರಳ ಬಹುಮತ; ಸರ್ಕಾರ ರಚನೆಗೆ INDIA ಕಸರತ್ತು; ಯುಪಿಯಲ್ಲಿ ಮುಗ್ಗರಿಸಿದ BJP; SP ಕಿಲಕಿಲ, DKSಗೆ ಸೋಲು! ಇಂದಿನ ಸುದ್ದಿ ಮುಖ್ಯಾಂಶಗಳು 04-06-24

NDAಗೆ ಸರಳ ಬಹುಮತ; ಸರ್ಕಾರ ರಚನೆಗೆ INDIA ಕಸರತ್ತು; ಯುಪಿಯಲ್ಲಿ ಮುಗ್ಗರಿಸಿದ BJP; SP ಕಿಲಕಿಲ, DKSಗೆ ಸೋಲು! ಇಂದಿನ ಸುದ್ದಿ ಮುಖ್ಯಾಂಶಗಳು 04-06-24
Published On :

1. NDAಗೆ ಸ್ಪಷ್ಟ ಬಹುಮತ. ಸರ್ಕಾರ ರಚನೆಗೆ INDIA ಕಸರತ್ತು

2024ರ ಲೋಕಸಭೆ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಸುಮಾರು 290 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಸುಮಾರು 230 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರವಾಗಿ ಸ್ಪರ್ಧಿಸಿ 18 ಮಂದಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ದೊಡ್ಡ ಹೊಡೆತ ಬಿದ್ದಿದ್ದು ಬಿಜೆಪಿ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಳೆದ ಬಾರಿ ಕ್ಲೀನ್ ಸ್ವೀಪ್ ಮಾಡಿದ್ದ ರಾಜಸ್ಥಾನದಲ್ಲಿ 14 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದು ಬಿಜೆಪಿಗೆ ತೀವ್ರ ಹಿನ್ನಡೆ ಉಂಟು ಮಾಡಿದ್ದು ಕಳೆದ ಬಾರಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಸುಮಾರು 240 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರದಲ್ಲಿ ಸರ್ಕಾರ ರಚನೆಗೆ ಮಿತ್ರಪಕ್ಷಗಳ ಬೆಂಬಲ ಅತ್ಯಗತ್ಯವಾಗಿದೆ. ಈ ಮಧ್ಯೆ NDA ಮೈತ್ರಿಕೂಟದ ಪಕ್ಷಗಳಿಗೆ NDIA ಬ್ಲಾಕ್ ದೊಡ್ಡ ಆಫರ್ ಗಳನ್ನು ಕೊಡುವ ಮೂಲಕ ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

2. ಕರ್ನಾಟಕದಲ್ಲಿ ಬಿಜೆಪಿಗೆ 17, ಕಾಂಗ್ರೆಸ್ ಗೆ 9, ಜೆಡಿಎಸ್ ಗೆ 2 ಸ್ಥಾನ

ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯುಂಟಾಗಿದ್ದು 17 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ 3 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರನ್ನು ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಬಿಜೆಪಿಯಿಂದ ಪ್ರಮುಖವಾಗಿ ಯದುವೀರ್ ಒಡೆಯರ್, ಪಿಸಿ ಮೋಹನ್, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಡಾ. ಕೆ ಸುಧಾಕರ್, ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಸಚಿವರ ಕುಟುಂಬಸ್ಥರಾದ ಸಾಗರ್ ಖಂಡ್ರೆ, ಪ್ರಿಯಾಂಕ ಜಾರಕಿಹೊಳಿ, ಸುನೀಲ್ ಬೋಸ್, ಪ್ರಭಾ ಮಲ್ಲಿಕಾರ್ಜುನ್, ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್ ನಿಂದ ಎಚ್ ಡಿ ಕುಮಾರಸ್ವಾಮಿ ಮತ್ತು ಮಲ್ಲೇಶ್ ಬಾಬು ಗೆಲುವು ಸಾಧಿಸಿದ್ದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋಲು ಕಂಡಿದ್ದಾರೆ.

3. ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯ

ಲೋಕಸಭಾ ಚುನಾವಣೆ ಜೊತೆಗೆ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ್ ನಾಯಕ ಅವರು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ರಾಜುಗೌಡ ವಿರುದ್ಧ 18320 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸುರಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾ ವೆಂಕಟಪ್ಪ ಅವರ ಪುತ್ರ ರಾಜಾ ವೇಣುಗೋಪಾಲ್ ಸ್ಪರ್ಧಿಸಿದ್ದರು.

4. ಆಂಧ್ರದಲ್ಲಿ ಟಿಡಿಪಿ ಕಮಾಲ್

ಲೋಕಸಭೆ ಚುನಾವಣೆ ಜೊತೆಗೆ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ NDA ಮೈತ್ರಿಕೂಟ ಅತ್ಯುತ್ತಮ ಪ್ರದರ್ಶನ ನೀಡಿದೆ. ವಿಧಾನಸಭೆಯಲ್ಲಿ ಚಂದ್ರಬಾಬು ನೇತೃತ್ವದ ಟಿಡಿಪಿ 136 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಬಿಜೆಪಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಆಂಧ್ರದಲ್ಲಿ ಈ ಬಾರಿ ಚಂದ್ರಬಾಬು ನೇತೃತ್ವದ ಸರ್ಕಾರದ ರಚನೆಯಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಟಿಡಿಪಿ 16 ಕ್ಷೇತ್ರಗಳಲ್ಲಿ ಮುಂದಿದ್ದು ಬಿಜೆಪಿ 3 ಕ್ಷೇತ್ರ ಹಾಗೂ ಜನಸೇನಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಈ ಬಾರಿ ಆಂಧ್ರದಲ್ಲಿ ಜಗನ್ ರೆಡ್ಡಿ ನೇತೃತ್ವದ YSRCP ವಿಧಾನಸಭೆಯಲ್ಲಿ 10 ಕ್ಷೇತ್ರಗಳಲ್ಲಿ ಹಾಗೂ 4 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ.

5. ಗೃಹಪ್ರವೇಶ ಸಮಾರಂಭದಲ್ಲಿ ಆಹಾಸ ಸೇವಿಸಿದ್ದ ಮಹಿಳೆ ಸಾವು

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಮಾರ್ಬಳ್ಳಿ ಗ್ರಾಮದಲ್ಲಿ ಗೃಹಪ್ರವೇಶ ಸಮಾರಂಭದಲ್ಲಿ ಆಹಾರ ಸೇವಿಸಿದ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, 39 ಗ್ರಾಮಸ್ಥರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಗ್ರಾಮದ 65 ವರ್ಷದ ಶಿವಮ್ಮ ಎಂಬುವವರು ನಿಧನರಾಗಿದ್ದಾರೆ. ಮಾರ್ಬಳ್ಳಿ ಗ್ರಾಮದಲ್ಲಿ ಮೇ 31ರಂದು ಗೃಹಪ್ರವೇಶ ಕಾರ್ಯಕ್ರಮ ನಡೆದಿದ್ದು, ಸಮಾರಂಭಕ್ಕೆ ಆಗಮಿಸಿದ್ದ 350ಕ್ಕೂ ಹೆಚ್ಚು ಮಂದಿ ಆಹಾರ ಸೇವಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.