ರಾಜ್ಯ

ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ವಿರುದ್ಧ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಪ್ರಕರಣದ ಕಕ್ಷಿದಾರರಾಗಿರುವ ರಾಹುಲ್ ಗಾಂಧಿ ಅವರು ಇಂದು ಹಾಜರಾಗುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರೂ ಗೈರುಹಾಜರಾಗಿದ್ದರು.

ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ವಿರುದ್ಧ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ರಾಹುಲ್ ಗಾಂಧಿ
Published On :

ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸುವ ಕುರಿತ ತೀರ್ಪಿನ ಆದೇಶವನ್ನು ಕರ್ನಾಟಕದ ವಿಶೇಷ ಸಂಸದ/ಶಾಸಕ ನ್ಯಾಯಾಲಯ ಶನಿವಾರ ಅಪರಾಹ್ನಕ್ಕೆ ಕಾಯ್ದಿರಿಸಿದೆ.

ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನ್ಯಾಯಾಲಯಕ್ಕೆ ಇಂದು ಬೆಳಗ್ಗೆ ಹಾಜರಾಗಿ ಜಾಮೀನು ಪಡೆದರು. ಪ್ರಕರಣದ ಕಕ್ಷಿದಾರರಾಗಿರುವ ರಾಹುಲ್ ಗಾಂಧಿ ಅವರು ಇಂದು ಹಾಜರಾಗುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರೂ ಗೈರುಹಾಜರಾಗಿದ್ದರು.

ಇಂದು ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನ ಮತ್ತು ಇಂಡಿಯಾ ಬ್ಲಾಕ್ ನಾಯಕರ ಸಭೆಯಿಂದಾಗಿ ತಮ್ಮ ಕಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ಗಾಂಧಿ ಪರ ವಕೀಲ ಎಸ್.ಎ.ಅಹ್ಮದ್ ಕೋರ್ಟ್ ಗೆ ವಿವರ ನೀಡಿದರು. ಜೂನ್ 7 ರಂದು ರಾಹುಲ್ ಗಾಂಧಿ ಹಾಜರಾಗಲಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ರಾಹುಲ್ ಗಾಂಧಿ ಪರ ಮತ್ತೊಬ್ಬ ವಕೀಲ ರಮೇಶ್ ಬಾಬು, ಜೂನ್ 7ರವರೆಗೆ ಆದೇಶ ಹೊರಡಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿ ರಾಹುಲ್ ಗಾಂಧಿಗೆ ಹಾಜರಾಗಲು ಮತ್ತೊಂದು ದಿನಾಂಕವನ್ನು ನೀಡುವಂತೆ ಕೋರಿದರು.

ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಈ ಬೇಡಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ರಾಹುಲ್ ಗಾಂಧಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ನ್ಯಾಯಾಲಯಕ್ಕೆ ಹಾಜರಾಗಲು ಮೂರನೇ ಅವಕಾಶ ನೀಡುವ ಅಧಿಕಾರವಿಲ್ಲ ಎಂದು ಅವರು ವಾದಿಸಿದರು.

ನ್ಯಾಯಾಲಯಕ್ಕೆ ಹಾಜರಾಗಲು ಸಮಯಾವಕಾಶ ನೀಡುವ ಅಧಿಕಾರ ನಿಜವಾಗಿಯೂ ಇದೆ ಎಂದು ವಕೀಲ ಅಹ್ಮದ್ ಪ್ರತಿವಾದಿಸಿದರು. ಕಾಲಾವಕಾಶ ನೀಡುವ ನ್ಯಾಯಾಲಯದ ಅಧಿಕಾರದ ಕುರಿತು ನ್ಯಾಯಾಲಯವು ಇಬ್ಬರೂ ವಕೀಲರನ್ನು ಪ್ರಶ್ನಿಸಿತು. ಅವರ ವಾದವನ್ನು ಆಲಿಸಿದ ನ್ಯಾಯಾಲಯವು ಈ ವಿಷಯದ ಬಗ್ಗೆ ತನ್ನ ಆದೇಶವನ್ನು ಕಾಯ್ದಿರಿಸಿ ಮುಂದೂಡಿತು.

ಕೇಶವ್ ಪ್ರಸಾದ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ, ಹಿಂದಿನ ಬಿಜೆಪಿ ಸರ್ಕಾರವು ಸರ್ಕಾರಿ ಯೋಜನೆಗಳನ್ನು ಒದಗಿಸಲು 40 ಪ್ರತಿಶತ ಕಮಿಷನ್ ವಿಧಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪೂರ್ಣ ಪುಟದ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಅಪ ಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.