ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪ; ಹೆಸರು ಬದಲಾಯಿಸುವುದು HDK ಕೈಯಲ್ಲಿ ಅಸಾಧ್ಯ - DKS; ಬೆಂಗಳೂರು ಪಿಜಿ ಯುವತಿ ಹತ್ಯೆ ಆರೋಪಿ ಮಧ್ಯಪ್ರದೇಶದಲ್ಲಿ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 27-07-24

1. ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರನ್ನು ಮತ್ತೆ ಬದಲಾಯಿಸುವುದು ಎಚ್.ಡಿ ಕುಮಾರಸ್ವಾಮಿ ಕೈಯಲ್ಲಿ ಅಸಾಧ್ಯ
ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರನ್ನು ಮತ್ತೆ ಬದಲಾಯಿಸುವುದು ಎಚ್.ಡಿ ಕುಮಾರಸ್ವಾಮಿ ಅವರ ಹಣೆಯಲ್ಲೂ ಬರೆದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರಿನವರು, ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಎಲ್ಲರೂ ಬೆಂಗಳೂರಿಗೆ ಸೇರಿದವರು. ನಮ್ಮ ಪೂರ್ವಜರು ಇಟ್ಟಂತಹ ಹೆಸರು ಅದನ್ನು ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿಗೆ ವಿಶ್ವಮಾನ್ಯತೆ ಇದೆ. ನಾವೆಲ್ಲ ಬೆಂಗಳೂರಿಗೆ ಸೇರಿದವರು. ಹಾಗಾಗಿಯೇ ರಾಮನಗರಕ್ಕೆ ಬಾಧಕವಾಗದಂತೆ ರಾಮನಗರವನ್ನೇ ಜಿಲ್ಲಾ ಕೇಂದ್ರವನ್ನಾಗಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ನಿನ್ನೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ 2028ರೊಳಗೆ ಮತ್ತೆ ರಾಮನಗರವಾಗಲಿದೆ ಎಂದು ಹೇಳಿದ್ದರು.
2. ಬೆಂಗಳೂರು ಪಿಜಿ ಯುವತಿ ಹತ್ಯೆ ಆರೋಪಿ ಮಧ್ಯಪ್ರದೇಶದಲ್ಲಿ ಬಂಧನ
ಬೆಂಗಳೂರಿನ ಕೋರಮಂಗಲದ ಪಿಜಿ ಹಾಸ್ಟೆಲ್ ಗೆ ಜುಲೈ 23ರಂದು ನುಗ್ಗಿ ಬಿಹಾರ ಮೂಲದ ಕೃತಿ ಕುಮಾರಿ ಎಂಬಾಕೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿ ಅಭಿಷೇಕ್ ನನ್ನು ಬಂಧಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ಜಾಡು ಹಿಡಿದು ಮೂರು ದಿನಗಳ ಹಿಂದೆಯೇ ಮಧ್ಯಪ್ರದೇಶಕ್ಕೆ ತೆರಳಿದ್ದ ಆಗ್ನೇಯ ವಿಭಾಗದ ಪೊಲೀಸರು ಭೋಪಾಲ್ನಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಅಭಿಷೇಕ್ ನನ್ನು ಬೆಂಗಳೂರಿಗೆ ಕರೆತಂದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ತಿಳಿಸಿದ್ದಾರೆ. ಮತ್ತೊಂದೆಡೆ ಇಂದು ಆರೋಪಿಯನ್ನು 41ನೇ ಎಸಿಎಂಎಂ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು ಕೋರ್ಟ್ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
3. ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಎಫ್ಐಆರ್
ರಾಜ್ಯದಲ್ಲಿ ಎಲ್ಲಿಯಾದರೂ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಅಂತವರ ವಿರುದ್ಧ ಆಗಸ್ಟ್ 1ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಶೇಕಡ 90ರಷ್ಟು ಮಾರಣಾಂತಿಕ ಅಪಘಾತಗಳಿಗೆ ಅತಿ ವೇಗವು ಕಾರಣವಾಗುತ್ತದೆ. ಗುರುವಾರ ಒಂದೇ ದಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, 155 ವಾಹನಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ದಾಖಲಿಸಲಾಗುತ್ತದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 105 ಕಿ.ಮೀ ವೇಗದಲ್ಲಿ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತದೆ. ಎಫ್ಐಆರ್ಗಳ ನೋಂದಣಿಗೆ 130 ಕಿಮೀ ಮಿತಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
4. ಬೆಂಗಳೂರು: ನಾಯಿ ಮಾಂಸ ಬೆರೆಸೆ ಮಾರಾಟ ಆರೋಪ
ಬೆಂಗಳೂರು ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾಂಸ ಸಾಗಾಟ ಪತ್ತೆಯಾಗಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು. ಆರೋಪ ಕೇಳಿಬಂದ ನಂತರ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇಂದು ಪಾರ್ಸೆಲ್ಗಳಲ್ಲಿ ಪತ್ತೆಯಾದ ಪ್ರಾಣಿಗಳ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಲ್ಯಾಬ್ ವರದಿ ಬಂದ ನಂತರ ವರದಿ ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಮಿಷನರೇಟ್ ತಿಳಿಸಿದೆ. ಶುಕ್ರವಾರ ರಾತ್ರಿ ರೈಲಿನಲ್ಲಿ ಜೈಪುರದಿಂದ ಬಾಕ್ಸ್ ಗಳಲ್ಲಿ ಲೋಡ್ ಮಾಡಲಾದ ಸುಮಾರು ಮೂರು ಟನ್ ತೂಕದ ಮಾಂಸ ಬೆಂಗಳೂರಿಗೆ ಸಾಗಿಸಲಾಗಿದ್ದು, ಈ ವೇಳೆ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕೆಲವು ಹಿಂದೂಪರ ಕಾರ್ಯಕರ್ತರು ಅದರಲ್ಲಿ ನಾಯಿ ಮಾಂಸ ಎಂದು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
5. ಧಾರವಾಡದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ರಾಜ್ಯದಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದ ರಾತ್ರಿ ಶೆಡ್ ನ ಗೋಡೆ ಕುಸಿದು ಧಾರವಾಡದ ವೆಂಕಟಾಪುರ ಗ್ರಾಮದಲ್ಲಿ ಯಲ್ಲಪ್ಪ ರಾಮಣ್ಣ ಎಂಬುವವರು ಮೃತಪಟ್ಟಿದ್ದಾರೆ. ಇನ್ನು ಮಣ್ಣಿನಡಿ ಸಿಲುಕಿದ್ದ ಯಲ್ಲಪ್ಪ ಪತ್ನಿ ಹನುಮವ್ವ ಹಾಗೂ ಪುತ್ರಿ ಯಲ್ಲವ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಬೃಹತ್ ಮರಗಳು ಧರೆಗುರುಳಿವೆ. ರಿಚ್ಮಂಡ್ ಸರ್ಕಲ್ ನಲ್ಲಿ ತೀವ್ರವಾದ ಗಾಳಿಗೆ ಏಕಾಏಕಿ ಮರವೊಂದು ಆಟೋ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಆಟೋ ಚಾಲಕ ದಿವಾಕರ್ ಎಂಬುವರ ಕಾಲುಗಳು ಮುರಿದಿವೆ. ಮತ್ತೊಂದೆಡೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಘಟನೆಯಲ್ಲಿ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಕಾರಿನಲ್ಲಿ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


