ಮುಡಾ ಹಗರಣ ಸಂಬಂಧ ಮೈಸೂರು ಚಲೋ: ಬಿ.ವೈ. ವಿಜಯೇಂದ್ರ ಸೇರಿ ಹಲವು ನಾಯಕರು ಪೊಲೀಸರ ವಶಕ್ಕೆ!
ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿ ಬೃಹತ್ ರ್‍ಯಾಲಿ ನಡೆಸುವ ಮೂಲಕ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ, ಮೈಸೂರು ರೋಡ್ ಕದಂಬ ಹೋಟೆಲ್ ಬಳಿ ಪ್ರತಿಭಟನೆ ನಡೆಸಿದ ವಿಜಯೇಂದ್ರ ಮತ್ತಿತರ ಬಿಜೆಪಿ ನಾಯಕರನ್ನು ಮುಂದಕ್ಕೆ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ.

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡಲಾಗಿದೆ ಎಂದು ಆರೋಪಿಸಿ ಮೈಸೂರಿಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಮಾರ್ಗ ಮಧ್ಯದಲ್ಲಿಯೇ ವಶಕ್ಕೆ ಪಡೆದರು.
ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿ ಬೃಹತ್ ರ್‍ಯಾಲಿ ನಡೆಸುವ ಮೂಲಕ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ, ಮೈಸೂರು ರಸ್ತೆಯ ಕದಂಬ ಹೋಟೆಲ್ ಬಳಿ ಪ್ರತಿಭಟನೆ ನಡೆಸಿದ ವಿಜಯೇಂದ್ರ ಮತ್ತಿತರ ಬಿಜೆಪಿ ನಾಯಕರು ಮುಂದಕ್ಕೆ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ. ಅವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು. ನಂತರ ಕಣಿಮಿಣಕೆಯ ಟೋಲ್ ಗೇಟ್ ಬಳಿ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್‌ಪ್ರೆಸ್ ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ಹಗರಣ ಮಾಡುತ್ತಿದೆ. ಮೈಸೂರಿನಲ್ಲಿ ನಡೆದಿರುವ ಭೂ ಹಗರಣ ದೊಡ್ಡಮಟ್ಟದ್ದು.ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಲಾಭ ತಂದುಕೊಡುವ ಸಲುವಾಗಿ ಕೆಲವು ಅಕ್ರಮಗಳನ್ನು ಮಾಡಲಾಗಿದೆ. ಇದನ್ನು ಸಿಬಿಐಗೆ ಕೊಡುವಂತೆ ಆಗ್ರಹಿಸಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ಒಪ್ಪಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸರ್ಕಾರಕ್ಕೆ ನಮ್ಮ ಪ್ರತಿಭಟನೆಯನ್ನು ತಡೆಯುವ ಸಾಮರ್ಥ್ಯವಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



