ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಶಾಸಕ ಬಸನಗೌಡ ದದ್ದಲ್ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಮನೆ ಮೇಲೆ ED ದಾಳಿ
ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್ಪಿಎಫ್ ಯೋಧರ ಸಹಕಾರದಿಂದ ದಾಳಿ ನಡೆಸಿದೆ.

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ವಾರ್ಡ್ ಸಂಖ್ಯೆ 2, ಆರ್‌ಆರ್ (ರಾಮ್ ರಹೀಮ್) ಕಾಲೊನಿಯಲ್ಲಿರುವ ದದ್ದಲ್ ಮನೆಯ ಮೇಲೆ ದಾಳಿ ನಡೆಸಿರುವ ಮೂವರು ಅಧಿಕಾರಿಗಳ ತಂಡ, ಬೆಳಗ್ಗೆ 7 ಗಂಟೆಯಿಂದ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಬಳ್ಳಾರಿಯ ನೆಹರು ಕಾಲೊನಿಯಲ್ಲಿರುವ ಬಿ.ನಾಗೇಂದ್ರ ಮನೆ ಮೇಲೂ ಬೆಳಗ್ಗೆ 3ರಿಂದ 4 ಅಧಿಕಾರಿಗಳಿದ್ದ ತಂಡ ದಾಳಿ ಮಾಡಿದೆ. ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ ಅಧಿಕಾರಿಗಳು, ನಾಗೇಂದ್ರರ ಮನೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್ಪಿಎಫ್ ಯೋಧರ ಸಹಕಾರದಿಂದ ದಾಳಿ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ರಾಮ್ಕ್ವ್ ಅಪಾರ್ಟ್ಮೆಂಟ್ನಲ್ಲಿರುವ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದೇ ರೀತಿ ಬಸವನಗೌಡ ದದ್ದಲ್ ನಿವಾಸವಲ್ಲದೆ, ಬೆಂಗಳೂರು ನಗರದ ಯಲಹಂಕ, ಕೋರಮಂಗಲ ಸೇರಿದಂತೆ ಏಕಕಾಲದಲ್ಲಿ 18 ಕಡೆಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದರ ಜೊತೆಗೆ ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಪದ್ಮನಾಭ್ ನಿವಾಸ, ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ್ ವರ್ಮಾ ನಿವಾಸ ಕಚೇರಿ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



