ರಾಹುಲ್ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ; ನಟ ದರ್ಶನ್ ಗೆ ವಿಶೇಷ ಸತ್ಕಾರವಿಲ್ಲ: ಡಾ. ಜಿ.ಪರಮೇಶ್ವರ್
ದರ್ಶನ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಇದರ ಬಗ್ಗೆ ಅಂದೇ ಸ್ಪಷ್ಟಪಡಿಸಿದ್ದೇನೆ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜೊತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ

ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಂಗಳವಾರ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸಾರಾಂಶವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.
ಹೊಸ ಕಾನೂನು ಚರ್ಚೆಯಾಗಬೇಕು: ಕೇಂದ್ರದಿಂದ ಹೊಸ ಮೂರು ಅಪರಾಧ ಕಾನೂನು ಜಾರಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹೊಸ ಕಾನೂನುಗಳು ಒಂದು ರಾಜ್ಯಕ್ಕೆ ಮಾತ್ರ ಸಂಬಂಧಪಟ್ಟಿದ್ದರೆ ವಾಪಸ್ ಪಡೆಯುವಂತೆ ಹೇಳಬಹುದಿತ್ತು. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದು. ಹೊಸ ಕಾನೂನು ಅಡಿ ರಾಜ್ಯದಲ್ಲಿ 80 ಪ್ರಕರಣಗಳು, ಬೆಂಗಳೂರು ನಗರದಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ನಿನ್ನೆ ದಾಖಲಾಗಿವೆ. ಮುಂದೆ ಲಕ್ಷಾಂತರ ಕೇಸ್‌ಗಳು ದಾಖಲಾಗುತ್ತವೆ. ಇದೆಲ್ಲವನ್ನು ಹೊಸ ಕಾನೂನಿನ ಅಡಿ ದಾಖಲಿಸಬೇಕು. ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು ಕಲಿತುಕೊಳ್ಳುತ್ತಾರೆ ಎಂದರು.
ಉಪವಾಸ ಸತ್ಯಾಗ್ರಹ ಮಾಡಿದರೆ ಆತ್ಮಹತ್ಯೆ ಪ್ರಕರಣ ದಾಖಲು ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಬಹುದು. ಕೆಲವು ಉತ್ತಮವಾದ ಅಂಶಗಳು ಇವೆ. ಎಲ್ಲವನ್ನು ತೆಗೆದು ಹಾಕಲು ಆಗುವುದಿಲ್ಲ. ಬ್ರಿಟಿಷ್ ಕಾಲದಲ್ಲಿ ಇದ್ದ ಕಾನೂನುಗಳನ್ನು ಬದಲಾವಣೆ ಮಾಡಿ, ಆಧುನಿಕ ಜಗತ್ತಿಗೆ ಬೇಕಾದ ಕಾನೂನುಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ಸಂಬಂಧ ನೋಟಿಸ್ ನೀಡುವುದು ಅಧ್ಯಕ್ಷರು ಮಾಡುವ ಕೆಲಸ. ಕಾರ್ಯಕರ್ತರು, ಶಾಸಕರು, ಸಚಿವರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬರ್ಥದಲ್ಲಿ ಅರ್ಥೈಸಿಕೊಂಡಿದ್ದೇನೆ. ಶಿಸ್ತು ಉಲ್ಲಂಘನೆ ಕುರಿತು ಸಮಿತಿ ವಿಚಾರಣೆ ಬಳಿಕ ತೀರ್ಮಾನ ಕೈಗೊಳ್ಳುವುದು ಪಕ್ಷದ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದು ಹೇಳಿದರು.
ವಿಶೇಷ ಸತ್ಕಾರವಿಲ್ಲ: ಇದೇ ವೇಳೆ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಆರೋಪ ಕುರಿತು ಮಾತನಾಡಿದ ಸಚಿವರು, ದರ್ಶನ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಇದರ ಬಗ್ಗೆ ಅಂದೇ ಸ್ಪಷ್ಟಪಡಿಸಿದ್ದೇನೆ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜೊತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




