ನೀರೆತ್ತುವ ಯೋಜನೆಗೆ ಚಾಲನೆ ನೀಡುವ ವೇಳೆ ಕರೆಂಟ್ ಕಟ್: ಮುಜುಗರಕ್ಕೊಳಗಾದ ಸಿಎಂ; ಚೆಸ್ಕಾಂ ಎಂಡಿ ಅಮಾನತು
ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ವಿದ್ಯುತ್ ಕಟ್ ಆಗಿದ್ದರಿಂದ ಮುಖ್ಯಮಂತ್ರಿಗಳು ಮುಜುಗರಕ್ಕೊಳಗಾದ ಸನ್ನಿವೇಶ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೈಸೂರು: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ವಿದ್ಯುತ್ ಕಟ್ ಆಗಿದ್ದರಿಂದ ಮುಖ್ಯಮಂತ್ರಿಗಳು ಮುಜುಗರಕ್ಕೊಳಗಾದ ಸನ್ನಿವೇಶ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಈ ಹಿನ್ನೆಲೆ ಕರ್ತವ್ಯ ಲೋಪದಡಿ ಚೆಸ್ಕಾಂ ಎಂಡಿ ಸಿ.ಎನ್.ಶ್ರೀಧರ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಾವೇರಿ ನದಿ ನೀರನ್ನು ಎತ್ತಿ ಪಿರಿಯಾಪಟ್ಟಣ ತಾಲೂಕಿನ 150 ಕೆರೆಗಳನ್ನು ತುಂಬಿಸುವ ಯೋಜನೆಗೆ ಬಟನ್ ಒತ್ತುವ ಮೂಲಕ ಚಾಲನೆ ನೀಡಬೇಕಿತ್ತು. ಆದ್ರೆ ಸಿಎಂ ಬಟನ್ ಒತ್ತಿದ್ದ ವೇಳೆ ವಿದ್ಯುತ್ ಕಟ್ ಆಗಿದ್ರಿಂದ ಮೋಟರ್ ಆನ್ ಆಗಲಿಲ್ಲ. ಇದರಿಂದ ಸಿಎಂ ಮುಜುಗರಕ್ಕೆ ಒಳಗಾದರು.
ಸಿಎಂ ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ವಹಿಸಲು ಚೆಸ್ಕಾಂ ಎಂಡಿ ಸಿ.ಎನ್.ಶ್ರೀಧರ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನದ ಆದೇಶದಲ್ಲಿ ಸೂಚನೆ ನೀಡಿದ್ದರು. ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದ್ದು ಹಾಜರಿದ್ದು, ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿತ್ತು.
ಆದರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕರಿಸದೇ ಕರ್ತವ್ಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯತನ ತೋರಿಸಿದ್ದಾರೆ. ಈ ಮೂಲಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಹಾಗಾಗಿ, ಈ ಸನ್ನಿವೇಶ ಸೃಷ್ಟಿಯಾಗಲು ಅವರು ನೇರ ಕಾರಣಕರ್ತರು ಎಂದು ಅಮಾನತು ಆದೇಶದಲ್ಲಿ ಕಾರಣಗಳನ್ನು ಉಲ್ಲೇಖಿಸಲಾಗಿದೆ.
ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆ, ಕಟ್ಟೆಗಳಿಗೆ ತುಂಬಿಸುವ ಯೋಜನೆಯ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಿ, ಉದ್ಘಾಟನೆ ಕಾರ್ಯ ನೆರವೇರಿಸುತ್ತಿದ್ದರು. ಬೃಹತ್ ಸಾರ್ವಜನಿಕ ಯೋಜನೆಯ ಲೋಕಾರ್ಪಣೆಗಾಗಿ ವಿಧ್ಯುಕ್ತವಾಗಿ ಬಟನ್ ಒತ್ತುವ ಮೂಲಕ ಚಾಲನೆ ನೀಡುವಾಗ ಅದು ಚಾಲನೆಯಾಗಲಿಲ್ಲ. ಇದರಿಂದ ಮುಖ್ಯಮಂತ್ರಿ ತೀವ್ರ ಮುಜುಗರ ಅನುಭವಿಸಿದರು.
ಚೆಸ್ಕಾಂ ಎಂಡಿ ಸ್ಥಳದಲ್ಲಿ ಹಾಜರಿಲ್ಲದೇ ಕರ್ತವ್ಯ ಲೋಪವೆಸಗಿರುವ ಸಂಬಂಧ ಮತ್ತು ಶಿಷ್ಟಾಚಾರ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾದ ಪ್ರಸ್ತಾವನೆಯನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಗೈರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದೇ ತೀವ್ರ ಮುಜುಗರ ಉಂಟುಮಾಡುವ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ಜಿಲ್ಲಾಧಿಕಾರಿಯವರ ವರದಿಯಂತೆ ಸ್ಪಷ್ಟವಾಗಿ ಕಂಡುಬರುತ್ತದೆ. ಹಾಗಾಗಿ ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಪಡಿಸಲು ತೀರ್ಮಾನಿಸಿ ಆದೇಶಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


