News Headlines 29-12-24 | BJP ನಾಯಕರ ಹತ್ಯೆಗೆ ಸುಪಾರಿ ಆರೋಪ: ಕೈ ನಾಯಕರ ವಿರುದ್ಧ FIR; ಸಚಿನ್ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ; ಜಿಲೆಟಿನ್ ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ!

1. ಸಚಿನ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ
ಪಂಚಾಯತ್‌ರಾಜ್ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಕೊಲೆ ಬೆದರಿಕೆ, ಹಣಕ್ಕೆ ಬೇಡಿಕೆಯಂತ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಬೀದರ್ ಗುತ್ತಿಗೆದಾರ ಸಚಿನ್ ಮಾನಪ್ಪ ನಿವಾಸಕ್ಕೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ್ದು ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಖಂಡ್ರೆ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಮ್ಮ ಸರ್ಕಾರವು ನ್ಯಾಯದ ಪರವಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು. ಅಲ್ಲದೆ, ಮೃತನ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸುವುದಾಗಿ ಹೇಳಿದರು. ಮತ್ತೊಂದೆಡೆ ಮೃತ ಸಚಿನ್ ಮನೆಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿ 5 ಲಕ್ಷ ಪರಿಹಾರವನ್ನು ನೀಡಿದರು. ಈ ವೇಳೆ ಪರಿಹಾರದ ಹಣವನ್ನು ತಿರಸ್ಕರಿಸಿದ ಸಚಿನ್ ಕುಟುಂಬಸ್ಥರು ನಮಗೆ ಹಣ ಬೇಡ, ನ್ಯಾಯ ಬೇಕು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದ್ದಾರೆ.
2. BJP ನಾಯಕರ ಹತ್ಯೆಗೆ ಸುಪಾರಿ ಆರೋಪ: ಕೈ ನಾಯಕರ ವಿರುದ್ಧ FIR
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಆರು ಮಂದಿ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ FIR ದಾಖಲಾಗಿದೆ. ಕಲಬುರಗಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ ದೂರು ನೀಡಿದ್ದು ನಾನು ಸೇರಿದಂತೆ ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಮಣಿಕಂಠ ರಾಠೋಡ್ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಮಾನಪ್ಪ ಡೆಟ್ ನೋಟ್ ನಲ್ಲಿ ಬರೆದಿದ್ದಾರೆ. ಹೀಗಾಗಿ ನಮಗೆ ಜೀವ ಭಯವಿದೆ ಎಂದು ಚಂದ್ರಕಾಂತ ಪಾಟೀಲ ದೂರು ನೀಡಿದ್ದು ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಜು ಕಪನೂರ, ನಂದಕುಮಾರ ನಾಗಭುಜಂಗೆ, ಗೋರಖನಾಥ ಸಜ್ಜನ್, ರೌಡಿಶೀಟರ್ ಪ್ರತಾಪ್ ಧೀರ ಪಾಟೀಲ, ಸೊಲ್ಲಾಪುರದ ಕಾರ್ಪೊರೇಟರ್ ಮನೋಜ್ ಸೆಜವಾಲ್ ಮತ್ತು ರಾಮನಗೌಡ ಪಾಟೀಲ ವಿರುದ್ಧ ಬಿಎನ್‌ಎಸ್ ಕಲಂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3. ಜಿಲೆಟಿನ್ ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ
ಮಂಡ್ಯ ಜಿಲ್ಲೆಯ ನಾಗಮಂಗಲದ ಗ್ರಾಮವೊಂದರಲ್ಲಿ ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆಯೇ ಯುವಕನೋರ್ವ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ರಾಮಚಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲೆಟಿನ್ ಸ್ಫೋಟಕ್ಕೆ ಯುವಕನ ಹೊಟ್ಟೆಯ ಭಾಗ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಂದು ವರ್ಷದ ಹಿಂದೆ ಅಪ್ರಾಪ್ತೆ ಕರೆದೊಯ್ದ ಹಿನ್ನೆಲೆಯಲ್ಲಿ ರಾಮಚಂದ್ರ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಫೋಕ್ಸೋ ಕೇಸ್‌ನಲ್ಲಿ 6 ತಿಂಗಳು ಜೈಲುವಾಸ ಅನುಭವಿಸಿದ್ದ. ನಂತರ 2 ಕುಟುಂಬಗಳ ರಾಜಿ ಸಂಧಾನ ಬಳಿಕ ಕೇಸ್ ಹಿಂಪಡೆಯಲಾಗಿತ್ತು. ನಂತರ ಅಪ್ರಾಪ್ತ ಪ್ರಿಯತಮೆ ರಾಮಚಂದ್ರನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಮನನೊಂದ ರಾಮಚಂದ್ರ ಅಪ್ತಾಪ್ತೆಯ ಮುನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
4. ಹುಬ್ಬಳ್ಳಿಯಲ್ಲಿ ಮತ್ತಿಬ್ಬರು ಮಾಲಾಧಾರಿಗಳು ಸಾವು
ಉಣಕಲ್‌ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ 9 ಮಂದಿ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಮತ್ತಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಶಂಕರ್ ಚವ್ಹಾಣ್ ಮತ್ತು ಮಂಜುನಾಥ ವಾಗ್ಮೋಡೆ ಅವರಿಗೆ ಕಳೆದ ಏಳು ದಿನಗಳಿಂದ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಇಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಮೂವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
5. ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ: ಪತ್ನಿ, ತಾಯಿ ಮತ್ತು ಸಹೋದರನ ಬಂಧನ
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಪತ್ನಿ, ಆಕೆಯ ತಾಯಿ ಮತ್ತು ಸಹೋದರನನ್ನು ಬಂಧಿಸಿದ್ದಾರೆ. ಅತುಲ್ ಸುಭಾಷ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಅವರ ಸೋದರ ಭಾವ ಅನುರಾಗ್ ಸಿಂಘಾನಿಯಾರನ್ನು ಬಂಧಿಸಿದ್ದಾರೆ. ಪೊಲೀಸರು ಎಲ್ಲ ಮೂವರು ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


