News Headlines 27-12-24 | ಮಾಜಿ PM ಮನಮೋಹನ್ ಸಿಂಗ್ ವಿಧಿವಶ; ಸಚಿವ ಪ್ರಿಯಾಂಕ್ ಆಪ್ತನ ವಿರುದ್ಧ ಆರೋಪ: ಗುತ್ತಿಗೆದಾರ ಸಾವು; Congress ಅಧಿವೇಶನ ಶತಮಾನೋತ್ಸವ ರದ್ದು!

1. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ತುರ್ತು ಚಿಕಿತ್ಸಾ ವಿಭಾಗಕ್ಕೆ ಮನಮೋಹನ್ ಸಿಂಗ್ ಅವರನ್ನು ದಾಖಲಿಸಲಾಗಿತ್ತು. ಅವರಿಗೆ 92 ವರ್ಷ ವಯಸ್ಸಾಗಿತ್ತು. 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. 1990 ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸಿದ್ದರ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. 6 ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಿಂಗ್, ಒಮ್ಮೆಯೂ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲಿಲ್ಲ. ಮೃತರು ಪತ್ನಿ ಸೇರಿದಂತೆ ಮೂವರು ಪುತ್ರಿಯರನ್ನು ಆಗಲಿದ್ದಾರೆ. ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಶುಕ್ರವಾರ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿ 7 ದಿನ ಅಂದರೆ ಡಿಸೆಂಬರ್ 26 ರಿಂದ ಜನವರಿ 1, 2025 ರವರೆಗೆ ರಾಷ್ಟ್ರೀಯ ಶೋಕಾಚರಣೆಯ ಘೋಷಿಸಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅವರ ನಿವಾಸದಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಗೌರವ ನಮನ ಸಲ್ಲಿಸಿದರು.
2. Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ರದ್ದು
ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಇಂದು ತನ್ನ ಬೃಹತ್ ಸಮಾವೇಶವನ್ನು ನಡೆಸಬೇಕಿದ್ದ ಸ್ಥಳದಲ್ಲಿ ಸಂತಾಪ ಸೂಚಕ ಸಭೆಯನ್ನು ನಡೆಸಿತು. ಪಕ್ಷದ ಹಲವು ಸಚಿವರು, ಮುಖಂಡರು ಉಪಸ್ಥಿತರಿದ್ದರು. ಮನಮೋಹನ್ ಸಿಂಗ್ ಅವರ ನಿಧನ ದೇಶಕ್ಕಷ್ಟೇ ಅಲ್ಲ, ವಿಶ್ವಕ್ಕೇ ದೊಡ್ಡ ನಷ್ಟ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ ಎಂದು ಸಂತಾಪ ಸಂದೇಶದಲ್ಲಿ ಸಿಎಂ ತಿಳಿಸಿದ್ದಾರೆ. ದೇಶದ ಬೆಳವಣಿಗೆಗಾಗಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ರಚಿಸಿದ ಸುಧಾರಣೆಗಳ ಬಗ್ಗೆ ಎಲ್ಲ ವಿದ್ಯಾರ್ಥಿಗಳು ಕಲಿಯಲು ನೆರವಾಗುವಂತೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
3. ಸಿಲಿಂಡರ್ ಸ್ಫೋಟ: ಮತ್ತಿಬ್ಬರು ಮಾಲಾಧಾರಿಗಳು ಸಾವು
ಉಣಕಲ್‌ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ 9 ಮಂದಿ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಮತ್ತಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 4 ಏರಿಕೆಯಾಗಿದೆ. ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಇನ್ನೂ ಐದು ಅಯ್ಯಪ್ಪ ಭಕ್ತರು ಸದ್ಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದಾರೆ.
4. ಪ್ರಿಯಾಂಕ್ ಆಪ್ತ ರಾಜು ಕಪನೂರು ವಿರುದ್ಧ ಕೊಲೆ ಬೆದರಿಕೆ: ಗುತ್ತಿಗೆದಾರ ಆತ್ಮಹತ್ಯೆ
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರು ವಿರುದ್ಧ ಹಣಕ್ಕೆ ಬೇಡಿಕೆ, ಕೊಲೆ ಬೆದರಿಕೆಯಂತ ಗಂಭೀರ ಆರೋಪಗಳನ್ನು ಮಾಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 26 ವರ್ಷದ ಸಚಿನ್ 7 ಪುಟಗಳ ಡೆತ್ನೋಟ್ ಬರೆದಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ನಲ್ಲಿ ರಾಜು ಕಪನೂರು ವಿರುದ್ಧ ಹಣಕ್ಕೆ ಬೇಡಿಕೆ, ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. 15 ಲಕ್ಷ ರೂಪಾಯಿ ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಅಲ್ಲದೆ 1 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಚಿನ್ ಆರೋಪಿಸಿದ್ದಾನೆ.
5. ಭದ್ರತೆ ನೀಡುವಂತೆ ಕೇಂದ್ರಕ್ಕೆ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮನವಿ
ಮುಡಾ ಹಗರಣ ಸಂಬಂಧ ದೂರು ನೀಡಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ತಮಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನು ತಮ್ಮ ಕುಟುಂಬಕ್ಕೆ ಭದ್ರತೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಕೇಂದ್ರದಿಂದ ಭದ್ರತೆ ಒದಗಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಮುಡಾ ಅಡಿಯಲ್ಲಿ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹಂಚಿಕೆ ಮಾಡಲಾಗಿದೆ ಎಂದು ದೂರು ಸಲ್ಲಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


