SC/ST Reservation: ಒಳಮೀಸಲಾತಿ ಕುರಿತ ಅಪಪ್ರಚಾರಕ್ಕೆ ಕಿವಿಗೊಡಬೇಡಿ; ಸಮುದಾಯದವರಿಗೆ ಕಾಂಗ್ರೆಸ್ ನಾಯಕರ ಮನವಿ
ಸರಕಾರ ಒಳಮೀಸಲಾತಿ ಜಾರಿಗೆ ತರಲು ಬದ್ಧವಾಗಿದ್ದು, ದಶಕಗಳ ಕಾಲ ನಿರಂತರ ಹೋರಾಟ ನಡೆಸಿದ ಮಾದಿಗ ಸಮುದಾಯದವರು ಇನ್ನೆರಡು ತಿಂಗಳು ತಾಳ್ಮೆಯಿಂದ ಇರಬೇಕು.

ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ವರದಿ ಸಲ್ಲಿಸಿದ ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಸಮುದಾಯ ಯಾರೊಬ್ಬರು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಪರಿಶಿಷ್ಟ ಜಾತಿ ಎಸ್‌ಸಿ (ಎಡ) ಸಮುದಾಯದ ನಾಯಕರು ಮನವಿ ಮಾಡಿಕೊಂಡಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು, ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರದ ಬಳಿ ದತ್ತಾಂಶ ಲಭ್ಯವಿಲ್ಲ ಎಂದು ಹೇಳುವ ಮೂಲಕ ಕೆಲವರು ಸಮುದಾಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರವು 2011 ರ ಜನಗಣತಿ ದತ್ತಾಂಶವನ್ನು ಪರಿಗಣಿಸುವ ಅವಕಾಶವಿದೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಸಂಗ್ರಹಿಸಿದ ಮಾಹಿತಿಯನ್ನು ಸಹ ಪರಿಗಣಿಸಬಹುದು. ಮೇಲಾಗಿ, ಕಾಂತರಾಜು ಆಯೋಗದ ಜಾತಿ ಗಣತಿ ವರದಿಯಲ್ಲಿ ಅಂಕಿಅಂಶಗಳು ಕೂಡ ಲಭ್ಯವಿವೆ. ಸರ್ಕಾರವು ಈ ವರದಿಯನ್ನು ಒಪ್ಪಿಕೊಂಡಿದ್ದೇ ಆದರೆ, ಒಳ ಮೀಸಲಾತಿಯನ್ನು ಜಾರಿಗೆ ತರಬಹುದು ಎಂದು ಹೇಳಿದರು.
ನಾಗಮೋಹನ್ ದಾಸ್ ಅವರ ಆಯೋಗವೇ ಬೇಡ ಎಂದು ಅನೇಕರು ವಾದ ಮಾಡುತ್ತಿದ್ದಾರೆ. ಪರಿಶಿಷ್ಟರಲ್ಲಿ ಜಾತಿವಾರು ಜನಗಣತಿ ಪೂರ್ಣ ಪ್ರಮಾಣದಲ್ಲಿಲ್ಲ. ಆದಿ ಕರ್ನಾಟಕ ಎಂದು ಮಾದಿಗರು ಹಾಗೂ ಛಲವಾದಿಗಳು ಇಬ್ಬರೂ ಬರೆಸಿದ್ದಾರೆ. ಆದಿ ದ್ರಾವಿಡ ಎಂದು ಎರಡು ಸಮುದಾಯವರು ಬರೆಸಿದ್ದಾರೆ. ಆದ ಕಾರಣ ಜಿಲ್ಲವಾರು ವಿವೇಚನೆಯನ್ನು ಬಳಸಿ ಯಾವ ಜಿಲ್ಲೆಯವರು ಯಾವ ಸಮುದಾಯಕ್ಕೆ ಸೇರುತ್ತಾರೆ ಎನ್ನುವುದನ್ನು ನಾಗಮೋಹನ್ ದಾಸ್ ಸಮಿತಿ ತೀರ್ಮಾನ ಮಾಡಬೇಕು ಎಂದು ಸರಕಾರ ತನ್ನ ನಿಯಮದಲ್ಲಿ ಅವರಿಗೆ ತಿಳಿಸಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಎರಡು ತಿಂಗಳ ಅವಧಿಯಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಲಿದ್ದು, ಬಳಿಕ ಸರ್ಕಾರವು ಒಳಮೀಸಲಾತಿ ವರದಿಯನ್ನು ಜಾರಿಗೆ ತರಲಿದೆ. ಅಲ್ಲಿಯವರೆಗೆ, 35,000 ಖಾಲಿ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆಯನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಚಂದ್ರಪ್ಪ ಅವರು ಮಾತನಾಡಿ, ಭೋವಿ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವುದಾಗಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಸರಕಾರ ಒಳಮೀಸಲಾತಿ ಜಾರಿಗೆ ತರಲು ಬದ್ಧವಾಗಿದ್ದು, ದಶಕಗಳ ಕಾಲ ನಿರಂತರ ಹೋರಾಟ ನಡೆಸಿದ ಮಾದಿಗ ಸಮುದಾಯದವರು ಇನ್ನೆರಡು ತಿಂಗಳು ತಾಳ್ಮೆಯಿಂದ ಇರಬೇಕೆಂದು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



