CAR ನಲ್ಲಿ ಹಣ ದುರುಪಯೋಗ ಆರೋಪ: FIR ದಾಖಲು
2024ರ ಜನವರಿಯಲ್ಲಿ ನಡೆಸಲಾಗಿರುವ 2020ರಿಂದ 2022ರ ಅವಧಿಯ ನಡುವಿನ ಹಣದ ವ್ಯವಹಾರದ ಕುರಿತ ಲೆಕ್ಕಪತ್ರ ಪರಿಶೋಧನೆಯಲ್ಲಿ 59.80 ಲಕ್ಷ ರೂ. ಹಣದ ಕೊರತೆ ಕಂಡು ಬಂದಿದೆ.

ಬೆಂಗಳೂರು: ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಕೇಂದ್ರ ಘಟಕದಲ್ಲಿ 59.8 ಲಕ್ಷ ರೂಪಾಯಿ ಹಣ ದುರುಪಯೋಗದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಹಿಂದಿನ ಎಸ್‌ಡಿಎ ಪ್ರಶಾಂತ್ ಡಿ. ಎಸ್. ಹಾಗೂ ಸಹಾಯಕ ಆಡಳಿತಧಿಕಾರಿ ಸರೋಜಾ ಬಿ. ವಿರುದ್ಧ ಪ್ರಸ್ತುತ ಸಿಎಆರ್‌ನ ಸಹಾಯಕ ಆಡಳಿತಧಿಕಾರಿ ಡಿ. ರಾಜಲಕ್ಷ್ಮಿ ಅವರು ನೀಡಿರುವ ದೂರಿನನ್ವಯ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ, 2024ರ ಜನವರಿಯಲ್ಲಿ ನಡೆಸಲಾಗಿರುವ 2020ರಿಂದ 2022ರ ಅವಧಿಯ ನಡುವಿನ ಹಣದ ವ್ಯವಹಾರದ ಕುರಿತ ಲೆಕ್ಕಪತ್ರ ಪರಿಶೋಧನೆಯಲ್ಲಿ 59.80 ಲಕ್ಷ ರೂ. ಹಣದ ಕೊರತೆ ಕಂಡು ಬಂದಿದೆ. ಡಿಸಿಪಿ ಸಿಎಆರ್' ಅವರ ಹೆಸರಿನ ಬ್ಯಾಂಕ್ ಖಾತೆಗೆ ಹಾಕಿದ್ದ ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತದಲ್ಲಿ ಕೊರತೆಯಾಗಿದ್ದು, ಅನಧಿಕೃತ ವಹಿವಾಟು ನಡೆದ ಬಗ್ಗೆ ಮಹಾಲೇಖಪಾಲರು ವರದಿ ನೀಡಿದ್ದಾರೆ. ಆ ಅವಧಿಯಲ್ಲಿ ಸಹಾಯಕ ಆಡಳಿತಧಿಕಾರಿಯಾಗಿ ಸರೋಜಾ ಬಿ ಹಾಗೂ ನಗದು ಶಾಖೆಯ ವಿಶೇಷ ನಿರ್ವಾಹಕರಾಗಿ ಪ್ರಶಾಂತ್ ಡಿ. ಎಸ್. ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಲಾಗಿದೆ.
ಪ್ರಶಾಂತ್ ಅವರು ಮಂಡಿಸುವ ಕಡತಕ್ಕೆ ಅನುಮೋದನೆ ನೀಡುವ ಅಧಿಕಾರ ಸರೋಜಾ ಅವರದ್ದಾಗಿತ್ತು. ಸಿಎಆರ್ ಕೇಂದ್ರ ಘಟಕದ ಇಲಾಖಾ ವಹಿವಾಟಿನ ನಿರ್ವಹಣೆ ಅಧಿಕಾರ ಪ್ರಶಾಂತ್ ಅವರಿಗಿದ್ದು, ಅವರು ವರ್ಗಾವಣೆಯಾದ ನಂತರ ಆ ಸ್ಥಾನಕ್ಕೆ ಬಂದವರಿಗೆ ಚಾರ್ಜ್ ನೀಡಿಲ್ಲ. ಅಲ್ಲದೆ, ಅಕ್ರಮ ವಹಿವಾಟಿನ ಬಗ್ಗೆ ಸಹಾಯಕ ಆಡಳಿತಾಧಿಕಾರಿ ಅವರು ಶಿಸ್ತು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಇಲಾಖಾ ವಿಚಾರಣೆ ವೇಳೆ ಸೂಕ್ತ ಉತ್ತರ, ದಾಖಲೆಗಳನ್ನು ನೀಡಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಲಾಖೆಗೆ ವಂಚನೆ ಹಾಗೂ ನಂಬಿಕೆ ದ್ರೋಹ ಮಾಡಿ ಸರ್ಕಾರಕ್ಕೆ ರೂ.59,80,839 ಪಾವತಿಸದಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೇ ತಿಂಗಳಲ್ಲಿ ಬಿ. ಸರೋಜಾ ಅವರು ನಿವೃತ್ತಿಯಾಗಿದ್ದು, ಪ್ರಶಾಂತ್ ಅವರು ಕರ್ತವ್ಯದಲ್ಲಿದ್ದಾರೆ. ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



