ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ತನಿಖೆಗೆ ಹೈಕೋರ್ಟ್ ಎಸ್‌ಐಟಿ ರಚನೆ; ವರದಿ ಸಲ್ಲಿಕೆಗೆ 3 ತಿಂಗಳ ಗಡುವು!
ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತಕ್ಷಣ ಎಸ್‌ಐಟಿ ಆರಂಭಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಧಿಕಾರಿಗಳು ಎಸ್‌ಐಟಿಗೆ ಒದಗಿಸಬೇಕು. ಅಗತ್ಯಬಿದ್ದರೆ ಇತರೆ ಪೊಲೀಸ್ ಅಧಿಕಾರಿಗಳನ್ನು ಎಸ್‌ಐಟಿಯು ನೆರವಿಗೆ ಪಡೆಯಬಹುದು.

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣದ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಮಾಡಿಕೊಂಡಿದ್ದ ವಕೀಲೆ ಎಸ್ ಜೀವಾ ಪ್ರಕರಣದ ತನಿಖೆಗೆ ಹೈಕೋರ್ಟ್ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಸಿಬಿಐ) ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಗಡುವು ನೀಡಿದೆ.
ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಾಗೂ ತಮ್ಮ ವಿರುದ್ಧ ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಬಿಎನ್‌ಎಸ್ ಸೆಕ್ಷನ್ 108 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17(ಎ) ಅಡಿ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಡಿವೈಎಸ್‌ಪಿ ಬಿಎಂ ಕನಕಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ ನೇತೃತ್ವದ ಮೂರು ಅಧಿಕಾರಿಗಳ ವಿಶೇಷ ತನಿಖಾ ತಂಡ ನಡೆಸಲಿದೆ. ಕರ್ನಾಟಕ ಹೋಮ್ ಗಾರ್ಡ್‌ನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಎಸ್‌ಐಟಿಯ ಇನ್ನಿಬ್ಬರು ಸದಸ್ಯರಾಗಿರಲಿದ್ದಾರೆ ಎಂದು ನ್ಯಾಯಾಲಯ ಆದೇಶಿಸಿದೆ.
ಭೋವಿ ಹಗರಣದ ಪ್ರಕರಣದ ಆರೋಪಿಯೊಬ್ಬರಿಂದ ಕನಕಲಕ್ಷ್ಮಿ ಅವರು 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ದಾಖಲೆಯಿಲ್ಲ. ಬಿಎನ್‌ಎಸ್ ಸೆಕ್ಷನ್ 108 (ಐಪಿಸಿ ಸೆಕ್ಷನ್ 306) ಅಡಿ ಎಸ್‌ಐಟಿ ತನಿಖೆ ಮಾಡುವಾಗ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಗಮನಕ್ಕೆ ಬಂದರೆ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್ 17ಎ ಅಡಿ ಕಾನೂನಿನ ಅನ್ವಯ ತನಿಖೆ ನಡೆಸಬೇಕು ಎಂದೂ ನ್ಯಾಯಾಲಯವು ಆದೇಶಿಸಿದೆ.
ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತಕ್ಷಣ ಎಸ್‌ಐಟಿ ಆರಂಭಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಧಿಕಾರಿಗಳು ಎಸ್‌ಐಟಿಗೆ ಒದಗಿಸಬೇಕು. ಅಗತ್ಯಬಿದ್ದರೆ ಇತರೆ ಪೊಲೀಸ್ ಅಧಿಕಾರಿಗಳನ್ನು ಎಸ್‌ಐಟಿಯು ನೆರವಿಗೆ ಪಡೆಯಬಹುದು. ತನಿಖೆ ಆರಂಭವಾದಗಿನಿಂದ ಮೂರು ತಿಂಗಳಲ್ಲಿ ತನಿಖೆ ಮುಗಿಯಬೇಕು. ತನಿಖಾ ವರದಿಯನ್ನು ಮೂರು ತಿಂಗಳು ಅಥವಾ ಅದರ ಒಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಎಸ್‌ಐಟಿಗೆ ಅಗತ್ಯವಾದ ಕಚೇರಿ ಮತ್ತಿತರ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



