ಪ್ರಿಯಾಂಕ್ ಖರ್ಗೆ ವಿರುದ್ಧ ಭೂಹಗರಣ ಆರೋಪ: ರಾಜ್ಯಪಾಲರಿಗೆ BJP ದೂರು; ರಾಜಾತಿಥ್ಯ: ಮತ್ತೆರೆಡು ಪ್ರಕರಣದಲ್ಲಿ ದರ್ಶನ್ A1; ಆ.31ರಂದು Congress ರಾಜಭವನ ಚಲೋ! ಇವು ಇಂದಿನ ಪ್ರಮುಖ ಸುದ್ದಿಗಳು 27-08-24

1. ಜೈಲಿನಲ್ಲಿ ರಾಜಾತಿಥ್ಯ: ಮತ್ತೆರೆಡು ಪ್ರಕರಣದಲ್ಲಿ Darshan A1, ಬೇರೆ ಜೈಲಿಗೆ ಸ್ಥಳಾಂತರ
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿದ್ದ ನಟ ದರ್ಶನ್ ಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೌಡಿಗಳ ಜೊತೆ ದರ್ಶನ್ ಸಿಗರೇಟು ಸೇದುತ್ತಾ ಆರಾಮವಾಗಿ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿದ್ದು ಎರಡು ಪ್ರಕರಣಗಳಲ್ಲಿ ದರ್ಶನ್ ಮೊದಲ ಆರೋಪಿಯಾಗಿದ್ದಾರೆ. ಈ ಪ್ರಕರಣಗಳ ತನಿಖೆ ಮಾಡಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ. ಮತ್ತೊಂದೆಡೆ ದರ್ಶನ್ ಮತ್ತು ಗ್ಯಾಂಗ್ ಅನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಸ್ಥಳಾಂತರಿಸುವ ಕುರಿತು ಬೆಂಗಳೂರು ಪೊಲೀಸ್ ಕಮಿಷನರ್ ಪಿ. ದಯಾನಂದ್ ಅವರು ಕಾರಾಗೃಹ ಇಲಾಖೆಗೆ ಪತ್ರ ಬರೆದಿದ್ದು, ವಿಶೇಷ ಸೌಲಭ್ಯಗಳು ಸಿಗದ ಜೈಲಿಗೆ ದರ್ಶನ್ ಅವರನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಈಮಧ್ಯೆ, ಬೆಳಗಾವಿಯ ಹಿಂಡಲಗಾ ಜೈಲಿನ 'ಡಾರ್ಕ್ ಸೆಲ್' ಗೆ ದರ್ಶನ್ ರನ್ನು ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಿದೆ. ಡಾರ್ಕ್ ಸೆಲ್ ಗೆ ಜೈಲರ್, ಸಹಾಯಕ ಜೈಲರ್, ಕಾನ್ಸ್ಟೆಬಲ್ ನಿಯೋಜಿಸಲಾಗಿದ್ದು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
2. ಪ್ರಿಯಾಂಕ್ ಖರ್ಗೆ ವಿರುದ್ಧ ಭೂಹಗರಣ ಆರೋಪ: ರಾಜ್ಯಪಾಲರಿಗೆ BJP ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಭೂಹಗರಣ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ನೋಂದಣಿ ಮಾಡಿದ್ದಾರೆ. ಇದೊಂದು ಧಾರ್ಮಿಕ ಉದ್ದೇಶದ ಟ್ರಸ್ಟ್. ಆದರೆ, ಏರೋಸ್ಪೇಸ್ ಸಂಬಂಧಿಸಿದ ನಿವೇಶನ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
3. ಆ.31ರಂದು ಕಾಂಗ್ರೆಸ್ ರಾಜಭವನ ಚಲೋ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ಧ ಮತ್ತೆ ಹೋರಾಟ ಮಾಡುತ್ತೇವೆ. ಅಲ್ಲದೆ ಆ.31ರಂದು ರಾಜಭವನ ಚಲೋ ಮೂಲಕ ರಾಜಭವನಕ್ಕೆ ತೆರಳಿ ಯಾವ ಯಾವ ಪೆಂಡಿಂಗ್ ಪ್ರಾಸಿಕ್ಯೂಷನ್ ಇದೆ ಅದನ್ನು ಜಾರಿಗೆ ತನ್ನಿ ಎಂದು ಮನವಿ ಸಲ್ಲಿಸುತ್ತೇವೆ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ತಾವು ಸಚ್ಚಾ ಎಂದು ಹೇಳಿಕೊಳ್ಳುತ್ತಾರೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆದೇಶ ತಾವು ಸಹಿ ಮಾಡಿಲ್ಲ ಎಂದು ಹೇಳಿದ್ದಾರೆ. ಅದು ಅವರ ಸಹಿ ಅಲ್ಲ ಅಂದಮೇಲೆ ಯಾರೋ ಫೋರ್ಜರಿ ಮಾಡಿದ್ದಾರೆ. ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
4. Dysp ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ: ಕೆಜೆ ಜಾರ್ಜ್ ಗೆ 'ಸುಪ್ರೀಂ' ರಿಲೀಫ್
DYSP ಎಂ. ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಕೆಜೆ ಜಾರ್ಜ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂದು ತನಿಖಾ ವರದಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಸಹ ನಿಪರಾಧಿ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೃತ ಗಣಪತಿ ಸಹೋದರಿ ಸಬೀತಾ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2016 ಜುಲೈ 7ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕು ಮುನ್ನ ವಿಡಿಯೋ ಮಾಡಿದ್ದ ಗಣಪತಿ ಅವರು, ತಮ್ಮ ಸಾವಿಗೆ ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಹಾಗೂ IPL ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎಎಂ ಪ್ರಸಾದ್ ಕಿರುಕುಳ ಕಾರಣ ಎಂದು ಆರೋಪಿಸಿದ್ದರು.
5. ತುಮಕೂರು: ಜಾತ್ರೆಯಲ್ಲಿ ಪ್ರಸಾದ ಸೇವಿಸಿದ್ದ ಮೂವರು ಮಹಿಳೆಯರು ಸಾವು
ತುಮಕೂರಿನ ಮಧುಗಿರಿಯ ಬುಳ್ಳಸಂದ್ರ ಗ್ರಾಮದಲ್ಲಿ ನಡೆದ ಕರಿಯಮ್ಮ ಮತ್ತು ಮುತ್ತುರಾಯ ಭೂತಪ್ಪ ದೇವರ ವಾರ್ಷಿಕ ಜಾತ್ರೆಯಲ್ಲಿ ಊಟ ಸೇವಿಸಿ ಮೂವರು ಮಹಿಳೆಯರು ಮೃತಪಟ್ಟು, 11 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಮೃತರನ್ನು ತಿಮ್ಮಕ್ಕ, ಗಿರಿಯಮ್ಮ, ಕಾಟಮ್ಮ ಎಂದು ಗುರುತಿಸಲಾಗಿದೆ. ಭಾನುವಾರ ಮಾಂಸಾಹಾರಿ ಆಹಾರ ಸೇವಿಸಿದ ನಂತರ, ಹಲವರಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಮೃತರ ಕುಟುಂಬಗಳು ತಯಾರಿಸಿದ ಆಹಾರ ಸೇವಿಸಿದವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


