ತುಂಗಭದ್ರಾ ಜಲಾಶಯ 19ನೇ ಗೇಟ್ ದುರಸ್ತಿಗೆ ಕ್ರಮ, ರೈತರ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನ: ಡಿಕೆ ಶಿವಕುಮಾರ್
ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಅಡಿ ಕೊಡಬೇಕಿದೆ. ರೈತರು ಗಾಬರಿಯಾಗುವ ಅಗತ್ಯವಿಲ್ಲ. ಮೂರು ಸರ್ಕಾರ ಒಟ್ಟಾಗಿ ಸಮಸ್ಯೆ ನಿವಾರಿಸಲಿವೆ. ರೈತರನ್ನು ಬದುಕಿಸಲು ಬೇಕಾದ ಕ್ರಮ

ಹೊಸಪೇಟೆ: ರೈತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ತುಂಗಭದ್ರಾ ಜಲಾಶಯದ 19ನೇ ಗೇಟ್ ನ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 12 ಲಕ್ಷ ಎಕರೆ ನೀರಾವರಿಗೆ ಜಲಾಶಯದ ನೀರು ಅಗತ್ಯವಾಗಿ ಬೇಕಾಗಿದೆ. ಶನಿವಾರ ರಾತ್ರಿ ಹತ್ತು ಗೇಟ್ ಮೂಲಕ ನೀರು ಬಿಟ್ಟಾಗ ಅದರಲ್ಲಿ 19ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಮೂಲಕ ನೀರು ಬಿಡಲಾಗಿದೆ ಎಂದರು.
ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ನಾಲ್ಕು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗೇಟ್ ದುರಸ್ತಿ ಜವಾಬ್ದಾರಿ ಅನುಭವಿ ಸಂಸ್ಥೆಗೆ ವಹಿಸಲಾಗಿದೆ. ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ಜಲಾಶಯದ ವಿನ್ಯಾಸ ನೀಡಲಾಗಿದೆ. ತಾಂತ್ರಿಕ ತಂಡದವರು ನಿನ್ನೆ ರಾತ್ರಿಯೇ ಇಲ್ಲಿಗೆ ಬಂದು ತಕ್ಷಣ ಕೆಲಸ ಆರಂಭಿಸಿದ್ದಾರೆ. ರೈತರಿಗೆ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಅಡಿ ಕೊಡಬೇಕಿದೆ. ರೈತರು ಗಾಬರಿಯಾಗುವ ಅಗತ್ಯವಿಲ್ಲ. ಮೂರು ಸರ್ಕಾರ ಒಟ್ಟಾಗಿ ಸಮಸ್ಯೆ ನಿವಾರಿಸಲಿವೆ. ರೈತರನ್ನು ಬದುಕಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದ್ದು, ಜನಪ್ರತಿನಿಧಿಗಳು ಸೇರಿ ಇತರರನ್ನು ಬಿಡುವಂತಿಲ್ಲ ಎಂದು ಹೇಳಿದರು.
ಇದು ತಾಂತ್ರಿಕ ವಿಷಯವಾಗಿದ್ದು, ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದ್ದು. ಬೇರೆ ಟೀಕೆ ಟಿಪ್ಪಣೆಗಿಂತ ಮೊದಲು ಗೇಟ್ ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



