ರಾಜ್ಯ

BJP-JDS ಪಾದಯಾತ್ರೆಗಳಿಗೆ ನಾನು ಬಗ್ಗಲ್ಲ- ಸಿಎಂ ಸಿದ್ದು; CM ವಿರುದ್ಧ ಖಾಸಗಿ ದೂರು: ಆ.13ಕ್ಕೆ ಕೋರ್ಟ್ ಆದೇಶ; ಕೊಡವ ಹಾಕಿಗೆ ಪ್ರಾಮುಖ್ಯತೆ ನೀಡಬೇಕು ! ಇವು ಇಂದಿನ ಪ್ರಮುಖ ಸುದ್ದಿಗಳು 09-08-24

BJP-JDS ಪಾದಯಾತ್ರೆಗಳಿಗೆ ನಾನು ಬಗ್ಗಲ್ಲ- ಸಿಎಂ ಸಿದ್ದು; CM ವಿರುದ್ಧ ಖಾಸಗಿ ದೂರು: ಆ.13ಕ್ಕೆ ಕೋರ್ಟ್ ಆದೇಶ; ಕೊಡವ ಹಾಕಿಗೆ ಪ್ರಾಮುಖ್ಯತೆ ನೀಡಬೇಕು ! ಇವು ಇಂದಿನ ಪ್ರಮುಖ ಸುದ್ದಿಗಳು 09-08-24
Published On :

1. ಬಿಜೆಪಿ-ಜೆಡಿಎಸ್ ಎಷ್ಟೇ ಪಾದಯಾತ್ರೆ ಮಾಡಿದರೂ ನಾನು ಬಗ್ಗಲ್ಲ, ರಾಜಿನಾಮೆ ನೀಡೋ ಪ್ರಶ್ನೆನೇ ಇಲ್ಲ: ಸಿದ್ದರಾಮಯ್ಯ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ- ಜೆಡಿಎಸ್ ನಡೆಸಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಮೈಸೂರಿನಲ್ಲಿಂದು ನಡೆಸಿದ ಜನಾಂದೋಲನ ಸಮಾವೇಶ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕೈ ನಾಯಕರು ಕಹಳೆ ಮೊಳಗಿಸಿ ಬಿಜೆಪಿ-ಜೆಡಿಎಸ್ ಆರೋಪಗಳಿಗೆ ಎದಿರೇಟು ನೀಡಿದರು. ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ ಎಂದರು. ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಎಲ್ಲಿಯವರೆಗೂ ಜನರ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಲುಗಾಡಿಸಲು ಸಾಧ್ಯವಿಲ್ಲ. ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧ ಇಲ್ಲ ಎನ್ನುವುದು ದಾಖಲೆಗಳಲ್ಲಿದೆ ಎಂದು ಹೇಳಿದರು.

2. ಬಿಜೆಪಿ ಜೆಡಿಎಸ್ ನದ್ದು ಪಾಪ ವಿಮೋಚನಾ ಯಾತ್ರೆ: ಡಿಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷ ನಡೆಸಿರುವ ಜನಾಂದೋಲನ ಹೋರಾಟ ಅಧರ್ಮ, ಅನ್ಯಾಯದ ವಿರುದ್ಧದ ಸತ್ಯದ ಯುದ್ಧ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ನವರ ಪಾದಯಾತ್ರೆ ಪಾಪ ವಿಮೋಚನಾ ಯಾತ್ರೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ಬಿಜೆಪಿ ಜೊತೆ ಸೇರಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಕುತಂತ್ರ ಸಫಲವಾಗಲ್ಲ. ಎರಡು ಜನ್ಮ ಎತ್ತಿದ್ದರೂ ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸಲು ಆಗಲ್ಲ. ಇನ್ನೂ 10 ತಿಂಗಳಲ್ಲ, 10 ವರ್ಷ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಆಗಲ್ಲ ಎಂದು ಗುಡುಗಿದರು. ಕ್ಲೀನ್ ಕುಮಾರಸ್ವಾಮಿ ಎಂದು ಹೇಳಿಕೊಂಡು ಓಡಾಡುತ್ತಿರುವ ಕುಮಾರಸ್ವಾಮಿ, ನಿಮ್ಮ 50 ಡಿನೋಟಿಫಿಕೇಷನ್ ಪ್ರಕರಣ ಇದೆ. ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದರು. ಮುಡಾ ಅಕ್ರಮ ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಆಗಸ್ಟ್ 2 ರಿಂದ ಬಿಡದಿಯಿಂದ ಜನಾಂದೋಲನ ಆರಂಭಿಸಿತ್ತು.

3. #MudaScam ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು: ಆಗಸ್ಟ್ 13ಕ್ಕೆ ಕೋರ್ಟ್ ಆದೇಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬುವವರು ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಆದೇಶ ಕಾಯ್ದಿರಿಸಿ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ. ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಆಗಸ್ಟ್ 13 ರಂದು ಆದೇಶ ಪ್ರಕಟಿಸುವ ಸಾಧ್ಯತೆ ಇದೆ.

4. ಕೊಡವ ಹಾಕಿಗೆ ಪ್ರಾಮುಖ್ಯತೆ ನೀಡಬೇಕು: ಸಂಸದ ಅಜಯ್ ಮಕೆನ್

ಮಾಜಿ ಕೇಂದ್ರ ಕ್ರೀಡಾ ಸಚಿವ ಮತ್ತು ಕರ್ನಾಟಕದ ರಾಜ್ಯಸಭಾ ಸಂಸದ ಅಜಯ್ ಮಾಕನ್ ಗುರುವಾರ ರಾಜ್ಯಸಭೆಯಲ್ಲಿ ಪ್ರಮುಖ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಕೊಡವ ಹಾಕಿ ಬಗ್ಗೆ ಪ್ರಸ್ತಾಪಿಸಿದ ಮಾಕೇನ್ ಈ ಕ್ರೀಡೆಗೆ ಬೆಂಬಲ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಪಂದ್ಯಾವಳಿಯ ಮಹತ್ವದ ಬಗ್ಗೆ ಮಾತನಾಡಿದ ಮಾಕನ್ 1997 ರಲ್ಲಿ ಪ್ರಾರಂಭವಾದ ಕೊಡವ ಹಾಕಿ ಅತಿದೊಡ್ಡ ಹಾಕಿ ಪಂದ್ಯಾವಳಿಯಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದೆ, ಸುಮಾರು 4,834 ಆಟಗಾರರು ಭಾಗವಹಿಸಿದ್ದಾರೆ. ಕೊಡಗು ಅಥವಾ ಕೂರ್ಗ್ ಅನ್ನು ಸಾಮಾನ್ಯವಾಗಿ "ಭಾರತೀಯ ಹಾಕಿಯ ತೊಟ್ಟಿಲು" ಎಂದು ಕರೆಯಲಾಗುತ್ತದೆ, ಏಳು ಒಲಿಂಪಿಯನ್‌ಗಳು ಸೇರಿದಂತೆ 50 ಅಂತಾರಾಷ್ಟ್ರೀಯ ಹಾಕಿ ಆಟಗಾರರನ್ನು ಕೊಡಗು ನಿರ್ಮಿಸಿದೆ ಎಂದು ಮಾಕನ್ ಒತ್ತಿ ಹೇಳಿದರು.

5. ಅಪಘಾತ: ಬೈಕ್ ಸವಾರ ಸಾವು

ವಿಜಯನಗರದ ಹೊಸಪೇಟೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಬುಕ್ಕಸಾಗರ ಗ್ರಾಮದಲ್ಲಿ ಬೈಕ್‌ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇವರಿಬ್ಬರೂ ಪಿಕೆ ಹಳ್ಳಿ ಗ್ರಾಮದವರು. ಬುಕ್ಕಸಾಗರಿಂದ ಗಂಗಾವತಿಯತ್ತ ಬೈಕ್ ಬರುವಾಗ ಮುಖಾಮುಖಿ ಡಿಕ್ಕಿ ಆಗಿದೆ. ಮತ್ತೊಂದೆಡೆ ಕೊಡಗಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೈಕ್‌ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಕೊಡಗಿನ ಸುಂಟಿಕೊಪ್ಪ ಬಳಿಯ ಶಾಂತಿಗೇರಿಯಲ್ಲಿ ರಾತ್ರಿ ಅಪಘಾತ ನಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ ಸವಾರರು ಇಬ್ಬರು ದುರ್ಮರಣ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.