ರಾಜ್ಯ

PSI ಪರಶುರಾಮ್ ನಿಗೂಢ ಸಾವು: ತನಿಖೆ CIDಗೆ; ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ತೀರ್ಮಾನ; 14 ಗಂಟೆಗಳ ಕೆಲಸಕ್ಕೆ ಐಟಿ ಸಂಘಗಳ ವಿರೋಧ! ಇವು ಇಂದಿನ ಪ್ರಮುಖ ಸುದ್ದಿಗಳು 04-08-24

PSI ಪರಶುರಾಮ್ ನಿಗೂಢ ಸಾವು: ತನಿಖೆ CIDಗೆ; ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ತೀರ್ಮಾನ; 14 ಗಂಟೆಗಳ ಕೆಲಸಕ್ಕೆ ಐಟಿ ಸಂಘಗಳ ವಿರೋಧ! ಇವು ಇಂದಿನ ಪ್ರಮುಖ ಸುದ್ದಿಗಳು 04-08-24
Published On :

1. PSI ಪರಶುರಾಮ್ ನಿಗೂಢ ಸಾವು: ತನಿಖೆ CIDಗೆ

ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಡಿವೈಎಸ್ಪಿ ಪುನೀತ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಯಾದಗಿರಿಗೆ ಆಗಮಿಸಿದ ತನಿಖೆ ನಡೆಸುತ್ತಿದ್ದಾರೆ. ಇನ್ನು ಮೃತ ಪರಶುರಾಮ ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ, ಪರಿಹಾರ ಕೊಡುವುದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕ ಮೇಲೆ ಆಪಾದನೆ ಕೇಳಿ ಬಂದಿದೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ ಎಂದು ತಿಳಿಸಿದರು. ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ವರ್ಗಾವಣೆ ವಿಚಾರದಿಂದ ಬೇಸರಗೊಂಡಿರುವುದಾಗಿ ಅವರ ಪತ್ನಿ ಹೇಳಿದ್ದಾರೆ. ಆ ಅಂಶವನ್ನೂ ತನಿಖೆಯ ವೇಳೆ ಪರಿಶೀಲಿಸಲಾಗುವುದು ಎಂದರು. ಮತ್ತೊಂದೆಡೆ ಇಂದು ಪರಶುರಾಮ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪಿಎಸ್​ಐ ಪರಶುರಾಮ ಸಾವಿನ ಬಗ್ಗೆ ವರದಿಯೇ ಬಂದಿಲ್ಲ, ಆದರೆ ಗೃಹ ಸಚಿವರು ಹೃದಯಾಘಾತದಿಂದ ಸಾವಾಗಿದೆ ಅಂತಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.

2. ಮೈಸೂರು ಚಲೋ ಪಾದಯಾತ್ರೆ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿರುವ ಮೈಸೂರು ಚಲೋ ಪಾದಯಾತ್ರೆ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯ ಮೊದಲ ದಿನವಾದ ನಿನ್ನೆ ಕೆಂಗೇರಿಯಿಂದ ಬಿಡದಿವರೆಗೂ ಪಾದಯಾತ್ರೆ ನಡೆಸಿ ಬಿಡದಿಯಲ್ಲಿ ವಾಸ್ಯವ್ತ ಹೂಡಿದ್ದ ಎರಡೂ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರುಗಳು ಪಾದಯಾತ್ರೆಯ 2ನೇ ದಿನವಾದ ಇಂದು ಬಿಡದಿಯಿಂದ ರಾಮನಗರಕ್ಕೆ ಹೆಜ್ಜೆ ಹಾಕಿದರು. ಅಂತಿಮವಾಗಿ ಎರಡನೇ ದಿನದ ಪಾದಯಾತ್ರೆ ರಾಮನಗರದಲ್ಲಿ ಮುಕ್ತಾಯಗೊಂಡಿದೆ. ರಾಮನಗರದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರದ ಹಗರಣಗಳ ಜನರಿಗೆ ತಿಳಿಸುವ ಸಲುವಾಗಿ ನಾವು ಪಾದಯಾತ್ರೆ ಕೈಗೊಂಡಿದ್ದೇವೆ ಹೊರತು ಅಸೂಯೆಯಿಂದಲ್ಲ ಎಂದು ಹೇಳಿದ್ದಾರೆ.

3. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ತೀರ್ಮಾನ

ಚಿತ್ರದುರ್ಗ ಸಿರಿಗೆರೆ ತರಳಬಾಳು ಗುರುಪೀಠ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ಸ್ವಾಮೀಜಿ‌ರನ್ನು ಪೀಠದಿಂದ ಕೆಳಗೆ ಇಳಿಸಲು ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ ಸ್ವಾಮೀಜಿ‌ರನ್ನು ಪೀಠದಿಂದ ಕೆಳಗೆ ಇಳಿಸಲು ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದ್ದು ಆಗಸ್ಟ್‌ 18ರಂದು ಸಿರಿಗೆರೆ ತರಳಬಾಳು ಮಠಕ್ಕೆ ಹೋಗಲು ನಿರ್ಧಾರ ಮಾಡಲಾಗಿದೆ. ಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಭಕ್ತರ ಆಗ್ರಹದಿಂದ ತ್ಯಾಗ ಮಾಡಲಿಲ್ಲ. ನಂತರ ಮಠದ ಟ್ರಸ್ಟ್ ತಿದ್ದು ಮಾಡಿಕೊಂಡಿದ್ದಾರೆ. ಅದು ಅಗತ್ಯ ಇತ್ತಾ ಎಂದು ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದ್ದಾರೆ.

4. ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ವ್ಯಕ್ತಿ ಸಾವು

ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೊಮ್ಮಸಂದ್ರ ಫ್ಲೈ ಓವರ್ ಬಳಿ ಮುಂದೆ ಹೋಗುತ್ತಿದ್ದ ಬೈಕ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟರೆ, ಸವಾರನ ಪತ್ನಿಯ ಎರಡು‌ ಕಾಲು ತುಂಡಾಗಿದೆ. ಇನ್ನು ಪವಾಡಸದೃಶ್ಯ ಸಣ್ಣ ಪುಟ್ಟ ಗಾಯಗಳ ಜೊತೆ ಮಗು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

5. 14 ಗಂಟೆಗಳ ಕೆಲಸಕ್ಕೆ ಐಟಿ ವಿರೋಧ

ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ ವಿರೋಧಿಸಿದ್ದು, 14 ಗಂಟೆ ಕೆಲಸ ಮಾಡಲು ನಾವೇನು ಜೀತದಾಳುಗಳಲ್ಲ ಎಂದು ಕಿಡಿಕಾರಿವೆ. ರಾಜ್ಯ ಸರ್ಕಾರ ಐಟಿ ಉದ್ಯೋಗಿಗಳ ಕೆಲಸದ ಅವಧಿ ಹೆಚ್ಚಿಸಲು ವಾಣಿಜ್ಯ ಸಂಸ್ಥೆಗಳ ಕಾಯಿದೆ 1961ಕ್ಕೆ ತಿದ್ದುಪಡಿ ಮಾಡಲು ಯೋಜಿಸಿರುವುದು ಉದ್ಯೋಗಿಗಳ ಕೋಪಕ್ಕೆ ಕಾರಣವಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ‌.ಏಕರೂಪ್ ಕೌರ್ ಅವರನ್ನು ಭೇಟಿ ಮಾಡಿದ್ದ ಐಟಿ/ಐಟಿಇಎಸ್ ನೌಕರರ ಸಂಘದ (ಕೆಐಟಿಯು) ಪ್ರತಿನಿಧಿಗಳು ರಾಜ್ಯ ಸರ್ಕಾರದ ಸಂಭಾವ್ಯ ನಿರ್ಧಾರಕ್ಕೆ‌ ಪ್ರತಿರೋಧ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.