ರಾಜ್ಯ

ಪಿಎಸ್ಐ ಪರಶುರಾಮ ಹಠಾತ್ ನಿಧನ: ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್; BJP-JDS ಮೈಸೂರು ಚಲೋ ಪಾದಯಾತ್ರೆ ಶುರು; ಜನಾಂದೋಲನ ಕಾರ್ಯಕ್ರಮ ಮೂಲಕ ಕಾಂಗ್ರೆಸ್ ಟಕ್ಕರ್! ಇವು ಇಂದಿನ ಪ್ರಮುಖ ಸುದ್ದಿಗಳು 03-08-24

ಪಿಎಸ್ಐ ಪರಶುರಾಮ ಹಠಾತ್ ನಿಧನ: ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್; BJP-JDS ಮೈಸೂರು ಚಲೋ ಪಾದಯಾತ್ರೆ ಶುರು; ಜನಾಂದೋಲನ ಕಾರ್ಯಕ್ರಮ ಮೂಲಕ ಕಾಂಗ್ರೆಸ್ ಟಕ್ಕರ್! ಇವು ಇಂದಿನ ಪ್ರಮುಖ ಸುದ್ದಿಗಳು 03-08-24
Published On :

1. ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಆರಂಭ

ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಮತ್ತು ಕಾಂಗ್ರೆಸ್ ಸರ್ಕಾರ ಅಕ್ರಮವೆಸಗಿದೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಬೆಂಗಳೂರಿನ ಮೈಸೂರು ರಸ್ತೆಯ ಕೆಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಹಾಗೂ ಹೆಚ್ ಡಿ ಕುಮಾರಸ್ವಾಮಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶಗಳನ್ನು ಹಂಚಲಾಗಿದೆ ಎಂಬ ಆರೋಪ ಬಿಜೆಪಿ, ಜೆಡಿಎಸ್‌ ಮಾಡುತ್ತಿದ್ದು ಈ ಸಂಬಂಧ ಸಿದ್ದರಾಮಯ್ಯ ರಾಜಿನಾಮೆ ನೀಡುವಂತೆ ಪಟ್ಟುಹಿಡಿದಿವೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಇನ್ನು ಮೈಸೂರು ಚಲೋ ಮೊದಲ ದಿನದ ಪಾದಯಾತ್ರೆ 16 ಕಿ.ಮೀ ಕ್ರಮಿಸಿ ಮುಕ್ತಾಯಗೊಂಡಿದೆ.

2. ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣ: ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಕೊಡಗು ಜಿಲ್ಲೆ ಪ್ರವಾಸ ಕೈಗೊಂಡಿದ್ದ ಮಳೆ, ಪ್ರವಾಹ ಪೀಡಿತ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇಂದು ಶಿರಾಡಿಘಾಟ್ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವೈಜ್ಞಾನಿಕ ಕಾಮಗಾರಿ ಕಂಡ ಆಘಾತಗೊಂಡರು. ಅಲ್ಲದೆ ಸ್ಥಳದಲ್ಲಿದ್ದ NHIA ಪ್ರಾದೇಶಿಕ ಅಧಿಕಾರಿ ವಿಲಾಸ್ ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣ ಎಂದು ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಮಳೆ ಮತ್ತು ಪ್ರವಾಹದಲ್ಲಿ ಮನೆ ಸಂಪೂರ್ಣ ಹಾನಿಗೊಳಗಾದ ಕುಟುಂಬಗಳಿಗೆ 1.2 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವು ಮನೆಗಳನ್ನು ನಿರ್ಮಿಸಿಕೊಡಲಿದೆ ಎಂದು ಹೇಳಿದ್ದರು.

3. ಪಿಎಸ್ಐ ಪರಶುರಾಮ ಹಠಾತ್ ನಿಧನ: ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಪರುಶರಾಮ್ ಅವರ ಪತ್ನಿ ಎನ್. ವಿ. ಶ್ವೇತಾ ದಾಖಲಿಸಿರುವ ದೂರಿನ ಮೇರೆಗೆ ಶಾಸಕ ಮತ್ತು ಅವರ ಪುತ್ರನ ವಿರುದ್ಧ ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನ, ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪತ್ನಿ ಶ್ವೇತ ತನ್ನ ಪತಿ ಯಾದಗಿರಿ ಠಾಣೆಯಲ್ಲಿಯೇ ಮುಂದುವರಿಯಲು ತಂದೆ-ಮಗ 30 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾರೆ. ಘಟನೆಯ ನಂತರ ದಲಿತ ಸಂಘರ್ಷ ಸಮಿತಿ ಸದಸ್ಯರು ಪರಶುರಾಮ್‌ಗೆ ನ್ಯಾಯಕ್ಕಾಗಿ ಒತ್ತಾಯಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

4. ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಮೈಸೂರಿಗೆ ಪಾದಯಾತ್ರೆ ಆರಂಭಿಸಿದ್ದು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಸಿದೆ. ರಾಮನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನನ್ನ ಬಟ್ಟೆ ಬಿಚ್ಚಿ ನೇಣಿಗೆ ಹಾಕಲಿ, ಆದರೆ ರಾಜ್ಯದ ಜನರಿಗೆ ಬಿಜೆಪಿ ಕಾಲದ ಹಗರಣಗಳು ಗೊತ್ತಾಗಬೇಕು. ಜನಾಂದೋಲನದ ಮೂಲಕ ಬಿಡಿಸಿ ಹೇಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಕುಮಾರಸ್ವಾಮಿಗೆ ಬೇಕು ಅಂತಲೇ ಪ್ರಶ್ನೆ ಹಾಕಿದೆ. ನಾನು ನಿನ್ನನ್ನ ತಿಹಾರ್ ಜೈಲಿಗೆ ಕಳುಹಿಸುತ್ತೀನಿ. ಮಿಲಿಟರಿಯವರು ಬರುತ್ತಾರೆ ಅಂದರು. ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು, ನನ್ನ ಮೇಲೆ ಹಾಕಿದ ಕೇಸೂ ನೋಡಿದ್ದು ಆಯ್ತು ಎಂದು ವಾಗ್ದಾಳಿ ನಡೆಸಿದರು.

5. ವಯನಾಡು ಭೂ ಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಸಿದ್ದು ಘೋಷಣೆ

ವಯನಾಡು ಭೂ ಕುಸಿತ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ, ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿ ಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ನೀಡಿದ್ದೇನೆ ಎಂದು ಹೇಳಿದ್ದಾರೆ. ವಯನಾಡು ಭೂಕುಸಿತದಲ್ಲಿ 330ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದ 9 ಜನರ ಪೈಕಿ 8 ಮಂದಿ ಮೃತದೇಹ ಪತ್ತೆಯಾಗಿದೆ. ಸವಿತಾ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.