ರಾಜ್ಯ

ನೇಹಾ ಹತ್ಯೆ: ಸಿಬಿಐಗೆ ವಹಿಸುವಂತೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ, ಸಿಐಡಿ ತನಿಖೆ ಚುರುಕು- ಸಿಎಂ ಸಿದ್ದರಾಮಯ್ಯ

ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದ್ದು ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ, ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು ನೇಹಾ ನಿವಾಸಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.

ನೇಹಾ ಹತ್ಯೆ: ಸಿಬಿಐಗೆ ವಹಿಸುವಂತೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ, ಸಿಐಡಿ ತನಿಖೆ ಚುರುಕು- ಸಿಎಂ ಸಿದ್ದರಾಮಯ್ಯ
ನೇಹಾ ಹಿರೇಮಠ ಮತ್ತು ಆರೋಪಿ ಫಯಾಜ್(ಸಂಗ್ರಹ ಚಿತ್ರ)
Published On :

ಬೀದರ್: ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇವೆ. ಆಕೆಯ ಕುಟುಂಬಕ್ಕೆ ಶೀಘ್ರವೇ ನ್ಯಾಯ ಒದಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೀದರ್ ನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕೇಳಲು ಬಿಜೆಪಿ ನಾಯಕರಿಗೆ ಯಾವ ನೈತಿಕ ಹಕ್ಕು ಇದೆ, ಹಿಂದೆ ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಯಾವುದಾದರೂ ಪ್ರಕರಣವನ್ನು ಸಿಬಿಐ ವಹಿಸಿದೆಯೇ ಎಂದು ಪ್ರಶ್ನಿಸಿದರು.

ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.

ನಾನು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ಸಿಬಿಐ (CBI) ಗೆ ವಹಿಸಿದ್ದೇನೆ. ಬಿಜೆಪಿಯವರಿಗೆ ಕೇಳಲು ಯಾವ ನೈತಿಕ ಹಕ್ಕಿದೆ. ಇದರಲ್ಲಿ ರಾಜಕೀಯ ಮಾಡಬಾರದು. ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದು, ಸರ್ಕಾರ ಈಗಾಗಲೇ ಆರೋಪಿಯನ್ನು ಬಂಧಿಸಿದೆ., ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ತಯಾರಿಸಲಿದೆ ಎಂದರು.

ಇಂದು ನೇಹಾ ನಿವಾಸಕ್ಕೆ ಸಿಎಂ: ಮೊನ್ನೆ ಏಪ್ರಿಲ್ 18ರಂದು ಸಹಪಾಠಿಯಿಂದ ಹತ್ಯೆಗೀಡಾದ ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ನಿವಾಸಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಅವರ ತಂದೆ ನಿರಂಜನ್ ಹಿರೇಮಠ, ತಾಯಿ ಗೀತಾ ಹಿರೇಮಠ ಅವರಿಗೆ ಸಾಂತ್ವನ ಹೇಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನೇಹಾ ನಿವಾಸ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರ ಆಸ್ತಿ ಕಸಿದುಕೊಂಡು ಸಂಪತ್ತು ಹಂಚುವ ಬಗ್ಗೆ ಮೋದಿಯವರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಈಡೇರಿಸಿದರೇ? ಅಗತ್ಯವಸ್ತುಗಳ ಬೆಲೆಯನ್ನು ಮೋದಿಯವರು ಕಡಿಮೆ ಮಾಡಿದ್ದಾರೆಯೇ ಎಂದು ಸಿಎಂ ಪ್ರಶ್ನಿಸಿದರು.

ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ಮುಂದುವರೆದಿದೆ: ಕಾಂಗ್ರೆಸ್ ಪಕ್ಷ ಎಸ್‌ಸಿ, ಎಸ್‌ಟಿಗೆ ನೀಡಲಾಗಿರುವ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಿದೆ ಎಂದು ಮೋದಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ 1994 ರಿಂದ ಜಾರಿಗೆ ಬಂದಿತ್ತು. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾಲದಲ್ಲಿ ಈ ಮೀಸಲಾತಿಯನ್ನು ಹಿಂಪಡೆದಿದ್ದಕ್ಕೆ ಈ ವರ್ಗ ಸುಪ್ರಿಂ ಕೋರ್ಟ್ ಮೊರೆ ಹೋಯಿತು. ಆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ನ ಮುಂದೆ 4%ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದು, ಈ ಮೀಸಲಾತಿ ಈಗಲೂ ಮುಂದುವರೆಯುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.