ಹಾಸನದಲ್ಲಿ ಮುಗಿಯದ ಬೇಗುದಿ: ಪ್ರೀತಂ ಗೌಡರನ್ನು ಟೀಕಿಸಿದ್ದ ಬಿಜೆಪಿ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿತ!
ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡರನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿಯ ಪ್ರಮುಖ ಕಾರ್ಯಕರ್ತ ವಿಜಯ ಕುಮಾರ್ ಎಂಬುವರನ್ನು ಪ್ರೀತಂ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಾಸನ: ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡರನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿಯ ಪ್ರಮುಖ ಕಾರ್ಯಕರ್ತ ವಿಜಯ ಕುಮಾರ್ ಎಂಬುವರನ್ನು ಪ್ರೀತಂ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಎಂ.ಜಿ.ರಸ್ತೆಯಲ್ಲಿರುವ ವಿಜಯಕುಮಾರ್ ಎಂಬುವವರ ಒಡೆತನದ ಇಂಟರ್‌ನೆಟ್ ಪಾರ್ಲರ್‌ಗೆ ನುಗ್ಗಿದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಜಯಕುಮಾರ್ ಮೇಲೆ ಹಲ್ಲೆ ನಡೆಸಿ ಗಾಜು ಮತ್ತು ಗಾಜೆಟ್‌ಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ ವಿಜಯಕುಮಾರ್ ಅವರನ್ನು ರಕ್ಷಿಸಲು ಬಂದ ಪ್ರಮೋದ್ ಮತ್ತು ಸಂದೇಶ್ ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಗಾಯಾಳು ವಿಜಯಕುಮಾರ್ ಗೆ ಸದ್ಯ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಕುಮಾರ್ ಇತ್ತೀಚೆಗೆ ಪ್ರೀತಂ ಗೌಡ ವಿರುದ್ಧ ಮಾಡಿದ ಹೇಳಿಕೆಯೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಮೈತ್ರಿ ನಿರ್ಧಾರ ಕೈಗೊಂಡಿದ್ದು, ಪ್ರೀತಂ ಗೌಡ ಸೇರಿದಂತೆ ಎಲ್ಲರೂ ಈ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ವಿಜಯ ಕುಮಾರ್ ಹೇಳಿದ್ದರು. ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರ‍್ಯಾಲಿಯಲ್ಲಿ ವಿಜಯಕುಮಾರ್ ಬಿಜೆಪಿ ಬಾವುಟ ಹಿಡಿದುಕೊಂಡು ಬಂದಿದ್ದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬೇಲೂರು ಶಾಸಕ ಎಚ್.ಕೆ.ಸುರೇಶ್, ಭವಾನಿ ರೇವಣ್ಣ ಆಸ್ಪತ್ರೆಗೆ ಭೇಟಿ ನೀಡಿ ವಿಜಯಕುಮಾರ್ ಆರೋಗ್ಯ ವಿಚಾರಿಸಿದರು. ಅಲ್ಲದೆ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರನ್ನು ಭೇಟಿ ಮಾಡಿ, ತಪ್ಪಿತಸ್ಥರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುವಂತೆ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



