ಚುನಾವಣಾ ಅಕ್ರಮ ತಡೆಗೆ ನಿಖಿಲ್ ಕುಮಾರಸ್ವಾಮಿ ಮನವಿ: ಆಕ್ಷೇಪಣೆ ಸಲ್ಲಿಸಲು ಆಯೋಗಕ್ಕೆ 2 ವಾರ ಕಾಲಾವಕಾಶ
ಚುನಾವಣಾ ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆ ಜೊತೆಗೆ ಕಠಿಣ ನಿಯಮಗಳನ್ನು ರೂಪಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಇನ್ನಿತರರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ.

ಬೆಂಗಳೂರು: ಚುನಾವಣಾ ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆ ಜೊತೆಗೆ ಕಠಿಣ ನಿಯಮಗಳನ್ನು ರೂಪಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಇನ್ನಿತರರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ.
ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗೌತಮ್ ಎಂ. ಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಚುನಾವಣಾ ಆಯೋಗದ ಪರ ವಕೀಲ ಎಸ್ ಆರ್ ದೊಡ್ಡವಾಡ ಅವರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠವು ಎರಡು ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
2023ರ ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡಿ ಆಮಿಷ ಒಡ್ಡಲಾಗಿದೆ. ಆಧುನಿಕ ತಂತ್ರಜ್ಙಾನ ಬಳಸಿ ಆಮಿಷ ಒಡ್ಡಲಾಗುತ್ತಿದೆ. ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯಲು ಸಾಧ್ಯವಿಲ್ಲ. ಚುನಾವಣಾ ಪೂರ್ವ, ಚುನಾವಣೆ ಸಂದರ್ಭದಲ್ಲಿ ಹಾಗೂ ಚುನಾವಣಾ ನಂತರದ ಭ್ರಷ್ಟಾಚಾರ, ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆಯ ಜೊತೆಗೆ ಕಠಿಣ ನಿಯಮ ರೂಪಿಸಬೇಕು. ಚುನಾವಣಾ ಅಕ್ರಮ, ಆಮಿಷಗಳನ್ನು ತಡೆಗಟ್ಟಲು ಈಗಿರುವ ಕಾನೂನು ಮತ್ತು ನಿಯಮಗಳನ್ನು ಮರು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕಳೆದ ವಿಚಾರಣೆಯಲ್ಲಿ ಪ್ರತಿವಾದಿಗಳಾದ ಭಾರತ ಚುನಾವಣಾ ಆಯೋಗ, ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ್ದ ಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



