ರಾಜ್ಯ

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣಗೆ ಮತ್ತೆ ಸಮನ್ಸ್ ಜಾರಿಗೆ ಕರ್ನಾಟಕ ಹೈಕೋರ್ಟ್ ಆದೇಶ

ಎಚ್‌ಡಿ ರೇವಣ್ಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆರೋಪಿಸಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಎಚ್‌ಡಿ ರೇವಣ್ಣ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣಗೆ ಮತ್ತೆ ಸಮನ್ಸ್ ಜಾರಿಗೆ ಕರ್ನಾಟಕ ಹೈಕೋರ್ಟ್ ಆದೇಶ
ಎಚ್ ಡಿ ರೇವಣ್ಣ
Published On :

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌ಡಿ ರೇವಣ್ಣ ಹಲವು ಅಕ್ರಮಗಳನ್ನು ನಡೆಸಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆರೋಪಿಸಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಎಚ್‌ಡಿ ರೇವಣ್ಣ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಈ ಹಿಂದೆ ವಿಚಾರಣೆ ನಡೆಸಿದ್ದ ವೇಳೆ ರೇವಣ್ಣ ಅವರಿಗೆ ವಿಧಾನಸಭೆಯ ಕಾರ್ಯದರ್ಶಿಗಳ ಮೂಲಕ ಸಮನ್ಸ್ ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ರೇವಣ್ಣ ಅವರಿಗೆ ಸಮನ್ಸ್ ತಲುಪಿರಲಿಲ್ಲ.

ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರ ಆಯ್ಕೆಯನ್ನು ಪ್ರಶ್ನಿಸಿ ರೇವಣ್ಣ ಅವರ ವಿರುದ್ಧ ಸ್ಪರ್ಧಿಸಿ ಪರಾಜಿತಗೊಂಡಿರುವ ಹೈಕೋರ್ಟ್ ವಕೀಲ ಜಿ. ದೇವರಾಜೇಗೌಡ ಅವರು ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದು, ಜೆಡಿಎಸ್ ನಾಯಕ ಚುನಾವಣಾ ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋಮವಾರ ಮತ್ತೆ ಅರ್ಜಿ ವಿಚಾರಣೆಗೆ ಬಂದಿದ್ದು, ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಮೀಳಾ ನೇಸರಗಿ ಅವರು ಪತ್ರಿಕೆಗಳಲ್ಲಿ ಜಾಹೀರಾತಿನ ಮೂಲಕ ಸಮನ್ಸ್ ನೀಡಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಕೋರಿದರು.

ಆದರೆ, ಚುನಾವಣಾ ತಕರಾರು ಅರ್ಜಿಗಳನ್ನು ನಿಯಂತ್ರಿಸುವ ನಿಯಮಗಳ ಪ್ರಕಾರವೇ ಸಮನ್ಸ್ ಅನ್ನು ಮತ್ತೆ ಜಾರಿ ಮಾಡಲಾಗುವುದು ಎಂದ ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರು, ಸಮನ್ಸ್ ಜಾರಿಗೆ ಆದೇಶಿಸಿ, ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದ್ದಾರೆ.

ರೇವಣ್ಣ ಅವರ ಬೆಂಬಲಿಗರು ಮತದಾರರಿಗೆ ತಲಾ ಎರಡು ಕೋಳಿ ಮತ್ತು ಎರಡು ಸಾವಿರ ರೂ. ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ. ಅಲ್ಲದೆ, ಅವರ ಮೇಲೆ ಪ್ರಭಾವ ಬೀರಲು ಹಿಂಸಾತ್ಮಕ ಘಟನೆಗಳಲ್ಲಿ ತೊಡಗಿದ್ದಾರೆ. ಅಲ್ಲದೆ, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಆಸ್ತಿ ವಿವರಗಳಲ್ಲಿಯೂ ಅಸಮರ್ಪಕತೆ ಇದೆ ಎಂದು ಆರೋಪಿಸಲಾಗಿದೆ.

ರೇವಣ್ಣ ಹಾಗೂ ಎರಡನೇ ಸ್ಥಾನ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇಬ್ಬರೂ ಮತದಾರರಿಗೆ ಲಂಚ ನೀಡಿ ಪ್ರಚೋದನೆ ನೀಡಿದ್ದು, ಅವರಿಬ್ಬರೂ ಪಡೆದ ಮತಗಳನ್ನು ಅಮಾನ್ಯಗೊಳಿಸಬೇಕು ಎಂದು ದೇವರಾಜೇಗೌಡ ಒತ್ತಾಯಿಸಿದ್ದಾರೆ. ಈ ಸಂಬಂಧ ಆಗಸ್ಟ್ 2ರಂದು ಹೈಕೋರ್ಟ್ ರೇವಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅದನ್ನು ರೇವಣ್ಣ ಅವರು ಸ್ವೀಕರಿಸಿರಲಿಲ್ಲ. 

ಸೆಪ್ಟೆಂಬರ್ 4 ರಂದು ಹೈಕೋರ್ಟ್ ವಿಧಾನಸಭೆಯ ಕಾರ್ಯದರ್ಶಿಗಳ ಮೂಲಕ ಮೂಲಕ ಸಮನ್ಸ್ ನೀಡಲು ಆದೇಶಿಸಿತ್ತು. 
ಚುನಾವಣೆಯಲ್ಲಿ ರೇವಣ್ಣ 88,103 ಮತಗಳನ್ನು ಪಡೆದರೆ, ಶ್ರೇಯಸ್ ಪಟೇಲ್ 84,951 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ದೇವರಾಜೇಗೌಡ ಕೇವಲ 4,850 ಮತಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.