ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣ: 2ನೇ ಆರೋಪಿ ರಶ್ಮಿಗೆ ಜಾಮೀನು ಮಂಜೂರು
ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಎಸ್ ರಶ್ಮಿಗೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು: ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಎಸ್ ರಶ್ಮಿಗೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ರಶ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರೆ ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಹಾಗೂ ಸಹಕರಿಸಬೇಕು ಎಂದು ಜಾಮೀನು ಮಂಜೂರಾತಿಗೆ ಹೈಕೋರ್ಟ್ ಷರತ್ತು ವಿಧಿಸಿದೆ. ಇದರೊಂದಿಗೆ ಈ ಪ್ರಕರಣದ ಬಂಧನಕ್ಕೆ ಒಳಗಾಗಿದ್ದ ಶಿವಮೂರ್ತಿ ಶರಣರೂ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ.
ಮೊದಲನೇ ಆರೋಪಿ ಮುರುಘಾ ಮಠದ ಡಾ.ಶಿವಮೂರ್ತಿ ಶರಣರಿಗೆ ಕುಮ್ಮಕ್ಕು ಹಾಗೂ ಸಹಕಾರ ನೀಡಿದ ಆರೋಪ ಅರ್ಜಿದಾರೆಯ ಮೇಲಿದೆ. ಇದೇ ಆರೋಪ ಮೂರನೇ ಆರೋಪಿಯಾದ ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ ಮೇಲಿದೆ. ಅವರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮತ್ತೊಂದೆಡೆ ಮೊದಲನೆ ಆರೋಪಿ ಶಿವಮೂರ್ತಿ ಶರಣರಿಗೆ ಜಾಮೀನು ದೊರೆತಿದೆ. ಆದ್ದರಿಂದ ಅರ್ಜಿದಾರೆಯೂ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಇಬ್ಬರು ಬಾಲಕಿಯರು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿ, ಮುರುಘಾ ಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನಲ್ಲಿ ಎಸ್ ರಶ್ಮಿ, ಬಾಲಕಿಯರನ್ನು ಸ್ವಾಮೀಜಿಯ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು ಮತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಸ್ವಾಮೀಜಿಯ ಕೃತ್ಯಕ್ಕೆ ಸಹಕರಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಶ್ಮಿ ಅವರನ್ನು ಪೊಲೀಸರು ಬಂಧಿಸಿದ್ದರು. ಚಿತ್ರದುರ್ಗದ ಸತ್ರ ನ್ಯಾಯಾಲಯ ರಶ್ಮಿಗೆ ಜಾಮೀನು ನಿರಾಕರಿಸಿತ್ತು. ಇದರಿಂದ ಆಕೆ ಹೈಕೋರ್ಟ್ ಮೊರೆ ಹೋಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


