ಎಚ್‌ಡಿ ಕುಮಾರಸ್ವಾಮಿ ಆರೋಗ್ಯದ ಕುರಿತು ಮಾಹಿತಿ ಪಡೆದ ಸಿದ್ದರಾಮಯ್ಯ; ಆಸ್ಪತ್ರೆಗೆ ಭೇಟಿ ಸಾಧ್ಯತೆ
ಬುಧವಾರ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿತಿಯನ್ನು ಮುಖ್ಯಮಂತ್ರಿ ಕಚೇರಿ ನಿರಂತರವಾಗಿ ಗಮನಿಸುತ್ತಿದೆ. ಸಿಎಂಒ ಅಧಿಕಾರಿಗಳು ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಎಲ್ಲಾ ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ಅಪ್‌ಡೇಟ್ ಮಾಡುತ್ತಿದ್ದರು.

ಬೆಂಗಳೂರು: ಬುಧವಾರ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿತಿಯನ್ನು ಮುಖ್ಯಮಂತ್ರಿ ಕಚೇರಿ ನಿರಂತರವಾಗಿ ಗಮನಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುವಲ್ಲಿ ನಿರತರಾಗಿದ್ದರೂ, ಸಿಎಂಒ ಅಧಿಕಾರಿಗಳು ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಎಲ್ಲಾ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಿದ್ದರು.
ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರೊಂದಿಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು, ಗುರುವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಮಂಗಳವಾರ ಸಂಜೆಯವರೆಗೂ ಚೆನ್ನಾಗಿಯೇ ಇದ್ದರು ಮತ್ತು ಸಾಮಾನ್ಯವಾಗಿಯೇ ಮಾತನಾಡುತ್ತಿದ್ದರು ಎಂದು ಮಂಗಳವಾರ ಕುಮಾರಸ್ವಾಮಿ ಜತೆಗಿದ್ದ ಮೂಲಗಳು ತಿಳಿಸಿದ್ದು, ಐಸ್‌ಲ್ಯಾಂಡ್, ಯೂರೋಪ್‌ನ ಫಿನ್‌ಲ್ಯಾಂಡ್, ಕಾಂಬೋಡಿಯಾ ಪ್ರವಾಸ ಮುಗಿಸಿ ಮರಳಿದ ನಂತರ ಅವರಿಗೆ ಆಮಂತ್ರಣಗಳ ಮಹಾಪೂರವೇ ಹರಿದು ಬಂದಿತ್ತು. ಹಲವಾರು ಮದುವೆಗಳು, ನಿಶ್ಚಿತಾರ್ಥಗಳು, ಗೃಹ ಪ್ರವೇಶ ಮತ್ತು ಮತ್ತಿತರ ಸಮಾರಂಭಗಳಿಗೆ ಅವರನ್ನು ಆಮಂತ್ರಿಸಲಾಗಿತ್ತು. ವಿಶೇಷವಾಗಿ, ಜುಲೈ 18 ರಿಂದ ಶ್ರಾವಣ ಮಾಸವು ಪ್ರಾರಂಭವಾದ ನಂತರ ಮಂಗಳಕರವೆಂದು ಪರಿಗಣಿಸಲಾಗಿದೆ.
ಕುಮಾರಸ್ವಾಮಿ ಅವರು ಕೆಲ ದಿನಗಳಲ್ಲಿ 500-600 ಕಿ.ಮೀ ಪ್ರಯಾಣಿಸಿ ಪಕ್ಷದ ಆಪ್ತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಸಂಚರಿಸಿ ನಂತರ ತುಮಕೂರಿಗೆ ಭೇಟಿ ನೀಡಬೇಕಿತ್ತು. ಅಲ್ಲಿಂದ ಮತ್ತೆ ಮಂಡ್ಯ, ಮೈಸೂರು, ಚಾಮರಾಜನಗರಕ್ಕೆ ತೆರಳಬೇಕಿತ್ತು. ಈ ಒತ್ತಡದ ವೇಳಾಪಟ್ಟಿಯು ಅವರ ಆರೋಗ್ಯ ಸಮಸ್ಯೆಗಳಿಗೆ ಕೊಡುಗೆ ನೀಡಿರಬಹುದು ಎಂದು ಅವರ ಆಪ್ತರು ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಇತರ ಕುಟುಂಬ ಸದಸ್ಯರು ಅಪೋಲೋ ಆಸ್ಪತ್ರೆಗೆ ಪದೇ ಪದೆ ಭೇಟಿ ನೀಡಿದರೆ, ಎಚ್‌ಡಿಕೆ ಅವರ ಇಬ್ಬರು ಸಹಾಯಕರಾದ ರಘು ಮತ್ತು ಸತೀಶ್ ದಿನವಿಡೀ ಆಸ್ಪತ್ರೆಯ ಹೊರಗಿದ್ದರು. ವಿದೇಶದಲ್ಲಿರುವ ಅವರ ಪುತ್ರ ನಿಖಿಲ್‌ಗೆ ಮಾಹಿತಿ ನೀಡಲಾಗಿದ್ದು, ಗುರುವಾರ ಮುಂಜಾನೆ ಆಗಮಿಸಲಿದ್ದಾರೆ.
ಅವರ ಸೋದರ ಸಂಬಂಧಿಗಳಾದ ಡಾ. ಚಂದ್ರಶೇಖರ್ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಕೂಡ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಂದೆ ಎಚ್.ಡಿ. ದೇವೇಗೌಡರು ದೂರವಾಣಿ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಕೂಡ ಬುಧವಾರ ಸಂಜೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು.
ಎಚ್‌ಡಿ ಕುಮಾರಸ್ವಾಮಿ ಅವರಿಗೆ ಆರೋಗ್ಯ ಸಮಸ್ಯೆ ಎಂದ ಕೂಡಲೇ ಪಕ್ಷದ ಹಲವು ಕಾರ್ಯಕರ್ತರು, ಪಕ್ಷದ ಮುಖಂಡರು, ಶಾಸಕರು ಹಾಗೂ ಮಾಜಿ ಶಾಸಕರು ಆಶ್ಪತ್ರೆಗೆ ದೌಡಾಯಿಸಿದ್ದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ತೊಂದರೆ ನೀಡದಂತೆ ಅವರಿಗೆ ಮನವಿ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


