ನಾನೇನೂ ತಪ್ಪು ಮಾಡಿಲ್ಲ, ಪಕ್ಷಕ್ಕಾಗಿ ದುಡಿದು ಸಮಸ್ಯೆಗಳ ಎದುರಿಸಿದ್ದೇನೆ: ಡಿಕೆ.ಶಿವಕುಮಾರ್
ನಾನೇನೂ ತಪ್ಪು ಮಾಡಿಲ್ಲ, ಪಕ್ಷಕ್ಕಾಗಿ ದುಡಿದು ಸಮಸ್ಯೆಗಳ ಎದುರಿಸಿದ್ದೇನೆಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಬುಧವಾರ ಹೇಳಿದರು.

ಬೆಂಗಳೂರು: ನಾನೇನೂ ತಪ್ಪು ಮಾಡಿಲ್ಲ, ಪಕ್ಷಕ್ಕಾಗಿ ದುಡಿದು ಸಮಸ್ಯೆಗಳ ಎದುರಿಸಿದ್ದೇನೆಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಬುಧವಾರ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಟೆಕ್ ಸಮಿಟ್ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಮ್ಮ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ರಿಲೀಫ್ ನೀಡುವ ಆದೇಶ ನೀಡಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
“ಈ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ಬಂದಿದ್ದೇನೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ ಪಾಟೀಲ್ ಅವರು ರಾಜ್ಯದಲ್ಲಿ ಬಂಡವಾಳ ಆಕರ್ಷಿಸಿ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸಲು, ರಾಜ್ಯವನ್ನು ಸಮೃದ್ಧಿಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದು, ಅವರಿಗೆ ಬೆಂಬಲವಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.
ನಮ್ಮ ಸರ್ಕಾರ ನೂತನ ಬಿಟಿ ನೀತಿ ಹಾಗೂ ಅನ್ವೇಷಣಾ ನೀತಿಗಳನ್ನು ಇಂದು ಪರಿಚಯಿಸಿದೆ. ಇಂದು ಸಾವಿರಾರು ಮಂದಿ ವಿದೇಶಿ ಬಂಡವಾಳ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನ್ಯಾಯಾಲಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ವಕೀಲರು ನಮಗೆ ಮಾಹಿತಿ ನೀಡದ ಹೊರತಾಗಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು) ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿದ್ದಾನೆ, ಈ ನಾಡಿನ ಜನರಿದ್ದಾರೆ. ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಈ ರಾಜ್ಯದಲ್ಲಿ ಏನಾಯಿತು ಎಂದು ತಿಳಿದಿದೆ. ನನ್ನ ಪರವಾಗಿ ನಿಂತವರು ಹಾಗೂ ಪ್ರಾರ್ಥನೆ ಮಾಡಿದ ಜನರಿಗೆ ಕೋಟಿ ನಮಸ್ಕಾರ” ಎಂದು ಹೇಳಿದರು.
ಯತ್ನಾಳ್ ಅವರು ನಿಮ್ಮ ವಿರುದ್ದ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲರ ಆಚಾರ ವಿಚಾರ, ಭಾವನೆ ಮತ್ತು ಅವರುಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಹಳ ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ” ಎಂದು ತಿಳಿಸಿದರು.
ಇದನ್ನೂ ಓದಿ: ಡಿಕೆಶಿಗೆ ಸದ್ಯ ರಿಲೀಫ್: ಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆಯಲು ಹೈಕೋರ್ಟ್ ಅಸ್ತು
ಬಿ.ಆರ್. ಪಾಟೀಲ್ ಅವರ ಅಸಮಾಧಾನದ ಬಗ್ಗೆ ಕುರಿತ ಪ್ರಶ್ನೆಗೆ ಉತ್ತರಿಸಿ, ಅವರು ಪತ್ರ ಬರೆದಿರುವ ವಿಚಾರ ತಿಳಿದಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಮಾಹಿತಿ ಗೊತ್ತಿಲ್ಲದೇ ಮಾತನಾಡಲು ನನಗೆ ಇಷ್ಟವಿಲ್ಲ. ಯಾವುದೇ ಶಾಸಕರಾಗಲಿ ಮಾತನಾಡಲು, ದನಿ ಎತ್ತಲು ಅವಕಾಶವಿದೆ. ಸದನದಲ್ಲಿ ಮಾತನಾಡುವಾಗ ತನಿಖೆಯಾಗಲಿ ಎಂದು ಹೇಳಿರಬಹುದು. ಕಂದಾಯ ಸಚಿವ ಕೃಷ್ಣಬೈರೇಗೌಡರು ಈಗಾಗಲೇ ತನಿಖೆ ಮಾಡಲು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ, ತನಿಖೆಗಳು ನಡೆಯುತ್ತಿರುವ ವಿಚಾರ ನನಗೂ ಗೊತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ” ಎಂದು ಹೇಳಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


