ಕೊಡಗು: ಜಿಂಕೆ ಬೇಟೆಯಾಡಿದ ಇಬ್ಬರ ಬಂಧನ, ಮೂವರು ಆರೋಪಿಗಳು ನಾಪತ್ತೆ
ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಪೊನ್ನಂಪೇಟೆ ಅರಣ್ಯ ವಲಯದ ಅಧಿಕಾರಿಗಳು ಹಾಗೂ ನಾಗರಹೊಳೆಯ ಕಲ್ಲಲ್ಲ ವನ್ಯಜೀವಿ ವಲಯದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಮಡಿಕೇರಿ: ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಪೊನ್ನಂಪೇಟೆ ಅರಣ್ಯ ವಲಯದ ಅಧಿಕಾರಿಗಳು ಹಾಗೂ ನಾಗರಹೊಳೆಯ ಕಲ್ಲಲ್ಲ ವನ್ಯಜೀವಿ ವಲಯದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಪೊನ್ನಂಪೇಟೆಯ ನಿಟ್ಟೂರು ಗ್ರಾಮದ ಬಿಸಿ ಜೀವನ್ ಮತ್ತು ವಿಜಿ ಲಿಂಗರಾಜ್ ಬಂಧಿತ ಆರೋಪಿಗಳು. ಅದೇ ಗ್ರಾಮದ ಶರತ್, ಚೇತನ್, ಸ್ವಾಮಿ ಸೇರಿದಂತೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ಮೂಲಗಳ ಪ್ರಕಾರ, ಆರೋಪಿ ಶರತ್ ಇತರರೊಂದಿಗೆ ನಾಗರಹೊಳೆ ಮಿತಿಯಲ್ಲಿರುವ ಕಲ್ಲಲ್ಲ ವನ್ಯಜೀವಿ ಅರಣ್ಯಕ್ಕೆ ತಮ್ಮ ಪರವಾನಗಿ ಪಡೆದ ಬಂದೂಕುಗಳೊಂದಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅವರು ಚುಕ್ಕೆ ಜಿಂಕೆಯನ್ನು ಬೇಟೆಯಾಡಿ, ಕೊಂದು ಅರಣ್ಯ ವಲಯದಿಂದ ಹೊರಗೆ ಕೊಂಡೊಯ್ದಿದ್ದಾರೆ. ನಂತರ ಜಿಂಕೆ ಮಾಂಸವನ್ನು ಹಂಚಿಕೊಂಡಿದ್ದಾರೆ. ಜಿಂಕೆಯ ಕೊಂಬುಗಳನ್ನು ಆರೋಪಿಗಳಲ್ಲಿ ಒಬ್ಬಾತ ತೆಗೆದುಕೊಂಡಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊನ್ನಂಪೇಟೆ ಹಾಗೂ ಕಲ್ಲಾಳ ವನ್ಯಜೀವಿ ಅರಣ್ಯಾಧಿಕಾರಿಗಳು ಮಾಂಸ ಸಂಗ್ರಹಿಸಿಟ್ಟಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಜೀವನ್ ಮತ್ತು ಲಿಂಗರಾಜ್ ಎಂಬುವರನ್ನು ಬಂಧಿಸಿದ್ದಾರೆ. ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಜಿಂಕೆ ಮಾಂಸ, ಕೊಂಬು ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವವರ ಪತ್ತೆಗೆ ತನಿಖೆ ಮುಂದುವರಿದಿದೆ.
ಪೊನ್ನಂಪೇಟೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಶಾಂತೇಶ್ ಅವರು ವಶಪಡಿಸಿಕೊಂಡ ಜಿಂಕೆ ಮಾಂಸವನ್ನು ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


