ಇನ್ನೂ ರಚನೆಯಾಗದ ಹೊಸ ಸರ್ಕಾರ: ವಲಸೆ ಕುರಿತು ಗೊಂದಲದಲ್ಲಿ ಗದಗದ ಕೂಲಿಕಾರ್ಮಿಕರು!
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದು 5 ದಿನಗಳು ಕಳೆದರೂ ಇನ್ನು ಹೊಸ ಸರ್ಕಾರ ರಚನೆಗೊಂಡಿಲ್ಲ. ಹೊಸ ಸರ್ಕಾರ ರಚನೆಗೊಳ್ಳದ ಹಿನ್ನೆಲೆಯಲ್ಲಿ ವಲಸೆ ಹೋಗುವ ಕುರಿತು ಗದಗದ ಕೂಲಿ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.

ಗದಗ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದು 5 ದಿನಗಳು ಕಳೆದರೂ ಇನ್ನು ಹೊಸ ಸರ್ಕಾರ ರಚನೆಗೊಂಡಿಲ್ಲ. ಹೊಸ ಸರ್ಕಾರ ರಚನೆಗೊಳ್ಳದ ಹಿನ್ನೆಲೆಯಲ್ಲಿ ವಲಸೆ ಹೋಗುವ ಕುರಿತು ಗದಗದ ಕೂಲಿ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.
ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಸಂಪುಟ ಸಭೆಯಲ್ಲಿಯೇ 5 ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಯೋಜನೆಗಳ ಅನುಷ್ಠಾನಕ್ಕಾಗಿ ಕಾರ್ಮಿಕರು ಕಾದು ಕುಳಿತಿದ್ದಾರೆ.
ಗದಗ ಹಲವಾರು ತಾಂಡಾಗಳಿಗೆ ನೆಲೆಯಾಗಿದ್ದು, ಪ್ರತಿ ತಾಂಡಾದಿಂದ ನೂರಾರು ಜನರು ಉದ್ಯೋಗ ಅರಸಿ ಕರ್ನಾಟಕದ ಇತರ ನಗರಗಳಿಗೆ ಮತ್ತು ಇತರ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.
ಮೇ 10ರಂದು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಈ ಕಾರ್ಮಿಕರು ಗದಗಕ್ಕೆ ಬಂದಿದ್ದರು. ಹೊಸ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇ ಆದರೆ, ಅನೇಕ ವಲಸಿಗರು ಗದಗದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಮನ್ರೇಗಾ ಕೆಲಸ ಇದ್ದಿದ್ದರೆ, ಆದಾಯ ಸಿಗುತ್ತಿತ್ತು. ಇದರ ಜೊತೆಗೆ ಸರ್ಕಾರ ಪ್ರತಿ ಮನೆಗೆ ರೂ.2 ಸಾವಿರ ನೀಡುವುದಾಗಿ ವಿದ್ಯುತ್'ಗೆ ಹಣ ಪಾವತಿಸುವಲ್ಲಿ, ಉಚಿತ ಬಸ್ ಪ್ರಯಾಣ, ಉಚಿತ ಪಡಿತರ ಭರವಸೆ ನೀಡಿದೆ. ಈ ಎಲ್ಲಾ ಸೌಲಭ್ಯಗಳು ಜಾರಿಯಾಗಿದ್ದೇ ಆದರೆ, ಉದ್ಯೋಗ ಅರಸಿ ಬೇರೆ ನಗರ ಹಾಗೂ ರಾಜ್ಯಗಳಿಗೆ ಪ್ರಯಾಣಿಸುವ ಅಗತ್ಯ ಎದುರಾಗುವುದಿಲ್ಲ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ.
ಇನ್ನು ಕೆಲ ವಲಸಿಗರು ಈ ಭರವಸೆಗಳೆಲ್ಲಾ ಚುನಾವಣಾ ತಂತ್ರವಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಉಚಿತ ಯೋಜನೆಗಳ ನೀಡಲು ಕೆಲವು ಷರತ್ತುಗಳನ್ನು ವಿಧಿಸುತ್ತದೆ. ಹೀಗಾಗಿ ನಮ್ಮ ನಮ್ಮ ಕೆಲಸಗಳಿಗೆ ಮರಳುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಆದರೆ, ಸ್ಥಳೀಯ ಮುಖಂಡರು ಇನ್ನೂ ಸ್ವಲ್ಪ ಸಮಯ ಕಾದು ನೋಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಲಕ್ಷ್ಮೇಶ್ವರದ ಲಾಲಪ್ಪ ರಾಠೋಡ್ ಮಾತನಾಡಿ, ‘ನಮ್ಮ ನಗರ, ಗ್ರಾಮ, ತಾಂಡಾಗಳಲ್ಲಿ ಎಲ್ಲ ಸೌಲಭ್ಯ ಸಿಕ್ಕರೆ ಬೇರೆ ಕಡೆ ಹೋಗುವುದೇಕೆ? ದಿನನಿತ್ಯದ ಕೆಲಸ, ಉಚಿತ ಊಟ, ವಿದ್ಯುತ್ ಬಿಲ್ ಇಲ್ಲ, ತಿಂಗಳಿಗೆ 2000 ರೂ. ಸಿಕ್ಕರೆ ಇಲ್ಲಿ ನೆಮ್ಮದಿಯ ಜೀವನ ನಡೆಸುತ್ತೇವೆ. ಸರ್ಕಾರದ ಘೋಷಣೆಗಾಗಿ ಕಾಯುತ್ತಿದ್ದೇವೆ ಮೊಬೈಲ್ ಫೋನ್ ಹೊಂದಿರುವವರು ಗ್ಯಾರಂಟಿಗೆ ಅರ್ಹರಲ್ಲ ಎಂದು ಹೇಳಿದ್ದೇ ಆದರೆ, ಕೆಲಸ ಅರಸಿ ಗೋವಾಗೆ ಹೋಗುತ್ತೇವೆಂದು ಹೇಳಿದ್ದಾರೆ.
ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗ ಕಾರ್ಡ್‌ಗಳನ್ನು ನೀಡುವ ಮೂಲಕ ವಲಸೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆಂದು ಜಿಲ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ಸರ್ಕಾರ ಏನು ನೀಡುತ್ತದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ, ಆದರೆ, ಅವರು ನೀಡಿದರೆ, ನಾವು ಜಾಗೃತಿ ಮೂಡಿಸುತ್ತೇವೆ ಮತ್ತು ಎಲ್ಲರಿಗೂ ಯೋಜನೆ ತಲುಪುವಂತೆ ಮಾಡುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


