ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲದಿದ್ದರೆ, ನಮಗೂ ಬಿಜೆಪಿ ಅಗತ್ಯವಿಲ್ಲ: ಕಾಂಗ್ರೆಸ್'ಗೆ ಬೆಂಬಲ ಘೋಷಿಸಿದ ವೀರಶೈವ-ಲಿಂಗಾಯತ ವೇದಿಕೆ!
ಬಿಜೆಪಿ ಪಕ್ಷಕ್ಕೆ ಲಿಂಗಾಯತರ ಅಗತ್ಯವಿಲ್ಲದಿದ್ದರೆ, ಲಿಂಗಾಯತರಿಗೂ ಬಿಜೆಪಿ ಬೇಕಿಲ್ಲ ಎಂದು ಹೇಳಿರುವ ವೀರಶೈವ-ಲಿಂಗಾಯತ ವೇದಿಕೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಲಿಂಗಾಯತರ ಅಗತ್ಯವಿಲ್ಲದಿದ್ದರೆ, ಲಿಂಗಾಯತರಿಗೂ ಬಿಜೆಪಿ ಬೇಕಿಲ್ಲ ಎಂದು ಹೇಳಿರುವ ವೀರಶೈವ-ಲಿಂಗಾಯತ ವೇದಿಕೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.
ಈ ಸಂಬಂಧ ಪ್ರತಿಕಾ ಪ್ರಕಟಣೆ ಹೊರಡಿಸಿರುವ ವೇದಿಕೆ, ಬಿಜೆಪಿ ಹಾಗೂ ಬಿಎಲ್.ಸಂತೋಷ್ ಅವರು ನೀಡಿದ್ದಾರೆನ್ನಲಾದ ಹೇಳಿಕೆಯ ವಿಡಿಯೋ ಕುರಿತು ಅಸಮಾಧಾನ ಹೊರಹಾಕಿದೆ.
ರಾಜ್ಯ ವಿಧಾನಸಭೆಗೆ ಮತ್ತೆ ಚುನಾವಣೆ ಬಂದಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿದರೆ ಲಿಂಗಾಯತ ಮತ್ತು ವೀರಶೈವ ಸಮುದಾಯಕ್ಕೆ ಆತಂಕಕಾರಿ ಬೆಳವಣಿಗೆಗಳು ಸ್ಪಷ್ಟವಾಗಿ ಗೋಚರಿಸತ್ತಿದೆ. ವೈದಿಕಶಾಹಿ ಮನಸ್ಥಿತಿಯ ಮನುವಾದಿಗಳು ನಡೆಸುತ್ತಿರುವ ಕುತಂತ್ರ ಮೇಲುಗೈ ಸಾಧಿಸುತ್ತಿದೆಯೇನೋ ಎಂದೆನಿಸುತ್ತಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಳಿದಾಡುತ್ತಿರುವ ಬಿಜೆಪಿ ಪಕ್ಷದ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಅವರು ಎಂದು ಹೇಳಲಾದ ಮಾತುಗಳು ಇದನ್ನು ಪುಷ್ಟೀಕರಿಸುತ್ತಿವೆ. ಮೊನ್ನೆ ನಡೆದ ಸಭೆಯೊಂದರಲ್ಲಿ ಸನ್ಮಾನ್ಯ ಬಿ.ಎಲ್.ಸಂತೋಷ್ ಅವರು ಹೇಳಿದ್ದಾರೆ ಎಂಬ ಹೇಳಿಕೆ ಇಡೀ ನಮ್ಮ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಆತಂಕಕಾರಿ ವಿಷಯವಾಗಿದೆ. ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ. ನಮಗೆ ಲಿಂಗಾಯಿತರ ಅಗತ್ಯವಿಲ್ಲ. ನಾವು ಇನ್ನೆಷ್ಟು ದಿನ ಲಿಂಗಾಯತರ ಓಲೈಕೆ ಮಾಡಿಕೊಂಡಿರಬೇಕು ಎಂಬ ಸಂತೋಷ್ ಅವರ ಮಾತುಗಳು ಅವರ ಅಹಂಕಾರದ ಪ್ರತೀಕವಾಗಿದೆ.
ಒಂದೆಡೆ ಸಿಎಂ ಬೊಮ್ಮಾಯಿ ಮತ್ತು ಅವರ ಸಂಪುಟದ ಲಿಂಗಾಯಿತ ಸಮುದಾಯದ ಮಂತ್ರಿಗಳು ನಾವುಗಳು ಬಸವಪಥದಲ್ಲೇ ಸಾಗುತ್ತಿದ್ದೇವೆಂಬ ಘೋಷಣೆಗಳು ಮತ್ತು ಸಂತೋಷ್ ಅವರ ಮಾತುಗಳನ್ನೊಮ್ಮೆ ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಬೊಮ್ಮಾಯಿ ಸರ್ಕಾರ ಬಂದಾಗಿನಿಂದ ಬಿಜೆಪಿ ಒಂದಲ್ಲಾ ಒಂದು ರೀತಿಯಲ್ಲಿ ಲಿಂಗಾಯರ ಮೇಲೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ದಬ್ಬಾಳಿಕೆ ನಡೆಸುತ್ತಲೇ ಬರುತ್ತಿದೆ. ಕಳೆದ 5 ವರ್ಷಗಳಿಂದ ಗಮನಿಸಿದಾಗ ಪಠ್ಯಪುಸ್ತಕಗಳಲ್ಲಿ ವಚನಕಾರರ ವಚನಸಾಹಿತ್ಯವನ್ನು ಕೈಬಿಟ್ಟಿರುವುದು ಮತ್ತು ಬಸವಣ್ಣನವರ ವಿಚಾರಧಾರೆಯನ್ನು ತಿರುಚಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಗಮಿಸಿದಾಗ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅವರು ಕಣ್ಣೀರು ಹಾಕುವಂತೆ ಮಾಡಿದ್ದು ನಮ್ಮೆಲ್ಲರ ಕಣ್ಮುಂದ ಇದೆ. ಯಡಿಯೂರಪ್ಪ ನಂತರ ನಾಯಕರ ಮೇಲೆ ದಾಳಿ ಶುರು ಮಾಡಿದ್ದು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್, ಸಂಜಯ್ ಪಾಟೀಲ್, ಸೊಗಡು ಶಿವಣ್ಣ, ಗುಲ್ಬರ್ಗಾದ ಚಂದ್ರಶೇಖರ್ ಮುಂತಾದ ಪ್ರಭಾವಿ ಲಿಂಗಾಯತ ನಾಯಕರುಗಳನ್ನು ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗಿದೆ.
ವಿ.ಸೋಮಣ್ಣ ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಲು ನಿರ್ದೇಶನ ನೀಡಿ, ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಹೀಗೆ ಕರ್ನಾಟಕ ರಾಜಕಾರಣದಲ್ಲಿ ಲಿಂಗಾಯತ ನಾಯಕತ್ವವನ್ನು ನಿರ್ನಾಮ ಮಾಡುವ ಬಿಜೆಪಿಯ ಕುತಂತ್ರ ಇದೀಗ ಸ್ಪಷ್ಟವಾಗಿದೆ.
ಮೋದಿ ಹಾಗೂ ಅಮಿತ್ ಶಾ ಅವರು ಲಿಂಗಾಯತರಿಗೆ ರಾಜ್ಯದ ಮುಂದಿನ ಸಿಎಂ ಬಿಂಬಿಸಲು ಆ ಸಮುದಾಯದ ರಾಜ್ಯಮಟ್ಟದ ಬಿಜೆಪಿ ಮುಖಂಡರು ವಿನಂತಿಸಿದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸುವುದು ದೊಡ್ಡ ದ್ರೋಹ. ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯರಿಗೆ ದ್ರೋಹ ಮಾಡಿದೆ ಎಂದು ಎಲ್ಲೆಡೆ ಬಿಂಬಿಸುವ ಪ್ರಯತ್ನಗಳನ್ನು ರಾಷ್ಟ್ರಮಟ್ಟದ ನಾಯಕರು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು. ಎಸ್.ನಿಜಲಿಂಗಪ್ಪ, ಬಿಡಿ.ಜತ್ತಿ, ವೀರೇಂದ್ರ ಪಾಟೀಲ್, ರಾಜಶೇಖರ ಮೂರ್ತಿ, ಎಸ್ಆರ್.ಪಾಟೀಲ್. ಎಂಬಿ ಪಾಟೀಲ್ ಮುಂತಾದವರನ್ನು ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ನೀಡಿ ನಿರಂತರವಾಗಿ ಗೌರವಿಸುತ್ತಿರುವುದು ಕಾಂಗ್ರೆಸ್ ಪಕ್ಷವೆಂದು ಸ್ಮರಿಸಬೇಕಾಗಿದೆ. ಎಲ್ಲಾ ಲಿಂಗಾಯತ ಮತ್ತು ವೀರಶೈವ ಸಮುದಾಯದವರು ಈ ಬಗ್ಗೆ ಎಚ್ಚೆತ್ತುಕೊಂಡು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಅದಕ್ಕೆ ತಕ್ಕ ಪಾಠ ಕಲಿಸುವುದಲ್ಲದೆ, ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


