ರಾಜ್ಯ

ಎಚ್‌ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ: 19 ವರ್ಷವಾದರೂ ಭೂಮಿ ರಕ್ಷಣೆಗೆ ಕ್ರಮಕೈಗೊಳ್ಳದ ಸರ್ಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಸಿದ್ದಾರೆ ಎನ್ನಲಾದ 14.04 ಎಕರೆ ಸರ್ಕಾರಿ ಜಮೀನನ್ನು 19 ವರ್ಷಗಳಾದರೂ ರಕ್ಷಣೆಗೆ ಮುಂದಾಗದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಎಚ್‌ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ: 19 ವರ್ಷವಾದರೂ ಭೂಮಿ ರಕ್ಷಣೆಗೆ ಕ್ರಮಕೈಗೊಳ್ಳದ ಸರ್ಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ
ಹೆಚ್.ಡಿ.ಕುಮಾರಸ್ವಾಮಿ
Published On :

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಸಿದ್ದಾರೆ ಎನ್ನಲಾದ 14.04 ಎಕರೆ ಸರ್ಕಾರಿ ಜಮೀನನ್ನು 19 ವರ್ಷಗಳಾದರೂ ರಕ್ಷಣೆಗೆ ಮುಂದಾಗದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ಸಂಬಂಧ ನ್ಯಾಯಾಲಯದ ಈ ಹಿಂದಿನ ಆದೇಶದಂತೆ ಖುದ್ದು ಮುಖ್ಯ ಕಾರ್ಯದರ್ಶಿಯವರೇ ಹಾಜರಾಗಿದ್ದರು. ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು.

ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ವೆಂಕಟೇಶ್‌ ನಾಯಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಲೋಕಾಯುಕ್ತರ ಆದೇಶವನ್ನು 2 ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು 2020ರಲ್ಲಿ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಿಳಿಸಿದ್ದರು. ದುರದೃಷ್ಟಕರವೆಂದರೆ ಆ ಆದೇಶವನ್ನು ಅನುಪಾಲಿಸಲಾಗಿಲ್ಲ. ಆನಂತರ ಲೋಕಾಯುಕ್ತರ ಆದೇಶ ಜಾರಿ ಮಾಡಲು ಹಲವು ಆದೇಶ ಮಾಡಲಾಗಿದೆ. ಲೋಕಾಯುಕ್ತ ಮತ್ತು ವಿಭಾಗೀಯ ಪೀಠದ ಆದೇಶದ ಬಳಿಕವೂ ಸರ್ಕಾರವು ಯಾವುದೇ ಕ್ರಮಕೈಗೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸಮನ್ಸ್‌ ನೀಡದೆ ಬೇರೆ ದಾರಿ ಇರಲಿಲ್ಲ. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಅನುಪಾಲನಾ ಅಫಿಡವಿಟ್‌ ಸಲ್ಲಿಸಿದ್ದಾರೆ. 19 ವರ್ಷ ಕಳೆದರೂ, ಲೋಕಾಯುಕ್ತರು ವರದಿ ಸಲ್ಲಿಸಿದ್ದರೂ ಇದುವೆರೆಗೂ ಸರ್ಕಾರವು ಆದೇಶವನ್ನು ಜಾರಿಗೆ ತಂದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಈ ಮಧ್ಯೆ, ಅಡ್ವೊಕೇಟ್‌ ಜನರಲ್‌ ಅವರು ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಲೋಕಾಯುಕ್ತ ವರದಿ ಅನುಸಾರ ಮತ್ತು 2004ರಲ್ಲಿ ತಹಶೀಲ್ದಾರ್‌ ಅವರು ಕೇತಗಾನಹಳ್ಳಿಯಲ್ಲಿನ 14.04 ಎಕರೆ ಭೂಮಿ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಲಿದೆ ಎಂದು ಎಜಿ ಭರವಸೆ ನೀಡಿದ್ದಾರೆ.

ಸರ್ಕಾರವು ತನ್ನ ಭೂಮಿ ರಕ್ಷಿಸುವ ಮತ್ತು ಪ್ರಕ್ರಿಯೆ ಆರಂಭಿಸುವ ಇಚ್ಛೆ ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ಹಾಗೂ ಸ್ಥಿತಿಗತಿ ವರದಿ ಸಲ್ಲಿಸಲು ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದು, ಮೂರು ತಿಂಗಳಲ್ಲಿ ಆಕ್ಷೇಪಾರ್ಹವಾದ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇದಕ್ಕೂ ಮುನ್ನ ಪೀಠವು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರನ್ನು ಕುರಿತು “ಲೋಕಾಯುಕ್ತ ಆದೇಶದ ಆನಂತರ ವಿಭಾಗೀಯ ಪೀಠವು ಆದೇಶ ಮಾಡಿದೆ. ಆದರೆ, ಏನೂ ಆಗಿಲ್ಲ. ಲೋಕಾಯುಕ್ತರು 2014ರಲ್ಲಿ, ವಿಭಾಗೀಯ ಪೀಠವು 2020ರಲ್ಲಿ ಆದೇಶ ಮಾಡಿದೆ. ಈಗ ನೀವು (ಎಜಿ) ಅಫಿಡವಿಟ್‌ ಸಲ್ಲಿಸಿ 14.04 ಎಕರೆ ಭೂಮಿಯ ಕುರಿತು ಸರ್ಕಾರ ಪರಿಶೀಲಿಸಲಿದೆ ಎಂದು ಹೇಳಿದ್ದೀರಿ. ಲೋಕಾಯುಕ್ತ ಆದೇಶ ಬಳಿಕ ತನಿಖೆ, ಪರಿಶೀಲನೆ ನಡೆಸಿರುವ ಬಗ್ಗೆ ಇದುವರೆಗೆ ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ. ಮಹಜರ್‌ ಸಹ ಮಾಡಿಲ್ಲ. ಸರ್ಕಾರದ ಜಮೀನನ್ನು ವಶಕ್ಕೆ ಪಡೆದಿಲ್ಲ. ರಾಜ್ಯ ಸರ್ಕಾರದ ಜಮೀನಿನ ಬಗ್ಗೆ ಯಾವುದೇ ಖಾತರಿ ಇಲ್ಲ. ಈ ಜಾಮೀನಿನ ಆರ್‌ಟಿಸಿ ಎಲ್ಲಿದೆ” ಎಂದು ಮೌಖಿಕವಾಗಿ ಪ್ರಶ್ನಿಸಿತು.

ಮುಂದುವರಿದು, “ಬಡ ವ್ಯಕ್ತಿಯಾದರೆ ಆತನನ್ನು ಆಚೆಗೆ ಎಸೆಯುತ್ತೀರಿ. ದೊಡ್ಡ ವ್ಯಕ್ತಿಯಾದರೆ ಈ ರೀತಿ ಆಗುತ್ತದೆ. ಇದುವರೆಗೆ ಸಲ್ಲಿಸಿದ್ದ ಅಫಿಡವಿಟ್‌ಗಳಲ್ಲಿ ಎಲ್ಲವನ್ನೂ ಜಾರಿ ಮಾಡಿದ್ದೇವೆ ಎಂದು ಹೇಳಿದ್ದೀರಿ. ಈಗ ಸಲ್ಲಿಸಲಾದ ಅಫಿಡವಿಟ್‌ ಹಿಂದಿನ ಅಫಿಡವಿಟ್‌ಗಳನ್ನು ಸುಳ್ಳು ಮಾಡಿದೆ. 2004ರಲ್ಲಿ ತಹಶೀಲ್ದಾರ್‌ ಆದೇಶ ಮಾಡಿದ್ದು, ಈಗ 2023. ಇದುವರೆಗೆ ಆ ಭೂಮಿಯನ್ನು ವಶಕ್ಕೆ ಪಡೆಯಲಾಗಿಲ್ಲ. 19 ವರ್ಷಗಳಾಗಿವೆ” ಎಂದು ಪೀಠ ಬೇಸರ ವ್ಯಕ್ತಪಡಿಸಿತು.

ಮಹಿಳಾ ಸಬಲೀಕರಣ ಜಾರಿಗೊಳಿಸಿ: ಪ್ರಾಮಾಣಿಕ ಮುಖ್ಯ ಕಾರ್ಯದರ್ಶಿ (ಸಿಎಸ್‌) ನ್ಯಾಯಾಲಯದ ಮುಂದೆ ಇದ್ದಾರೆ ಎಂಬುದು ನಮಗೆ ಗೊತ್ತಿದೆ. ಆಕೆಯನ್ನು ಬಂಧ ಮುಕ್ತಗೊಳಿಸಿದರೆ ಅವರು ಅದ್ಭುತ ಸೃಷ್ಟಿಸಲಿದ್ದಾರೆ. ನೀವು (ಸಿಎಸ್‌) ಹೆಚ್ಚು ಚಿಂತಿಸಬೇಡಿ. ಈಚೆಗಷ್ಟೇ ನಾವು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದೇವೆ. ಆ ಮಹಿಳಾ ಸಬಲೀಕರಣವನ್ನು ಜಾರಿಗೆ ತನ್ನಿ” ಎಂದು ಪೀಠವು ಮೌಖಿಕವಾಗಿ ಹೇಳಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.