ತುಮಕೂರು: ಸೂತಕದ ಸಂಪ್ರದಾಯಕ್ಕೆ ಮಗು ಬಲಿ; ಚಳಿಯಲ್ಲಿ ನಡುಗಿ ನಡುಗಿ ಪ್ರಾಣಬಿಟ್ಟ ಹಸುಗೂಸು!
ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ.

ತುಮಕೂರು: ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ. ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ ಬಳಲಿ ಮೃತಪಟ್ಟಿದೆ.
ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು.26ರಂದು ಪ್ರಾಣಬಿಟ್ಟಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಇದೀಗ ಮೌಡ್ಯತೆಯೇ ಮಗುವಿನ ಜೀವ ತೆಗೆದಿದೆ.

ಟೆಂಟ್‌ನಲ್ಲಿ ವಸಂತಾ ತನ್ನ ಮಗುವಿನೊಂದಿಗೆ
ವಿಪರೀತ ಗಾಳಿ, ಮಳೆ ಇದ್ದರೂ ಸಹ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಗ್ರಾಮದ ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗು ಮೃತಪಟ್ಟಿದೆ.
ಗ್ರಾಮದ ಸಿದ್ದೇಶ್ ಅವರ ಪತ್ನಿ ವಸಂತ ಕಳೆದ ತಿಂಗಳು 22ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತಗೆ ಹೆರಿಗೆ ಆಗಿತ್ತು. ಈ ವೇಳೆ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು. ಏಳು ತಿಂಗಳಿಗೆ ಹೆರಿಗೆ ಆಗಿದ್ದರಿಂದ ಪ್ರಿ-ಮ್ಯಾಚೂರ್ಡ್ ಬೇಬಿಯನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಕಳೆದ ಜು.14 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿಗೆ ರವಾನೆ ಮಾಡಿದ್ದರು. ಹೀಗಾಗಿ ಬಾಣಂತಿ ವಸಂತ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಮಗು ಅನಾರೋಗ್ಯಕೀಡಾಗಿ ಇದೀಗ ಪ್ರಾಣಬಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


