ಕೊಡಗಿನ ಗಡಿಭಾಗದ ಕನ್ನಡ ಶಾಲೆಯಲ್ಲಿ ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸುಮಾರು 70 ವಿದ್ಯಾರ್ಥಿಗಳ ಶಿಕ್ಷಣ ಈಗ ಅತಂತ್ರವಾಗಿದೆ...

ಮಡಿಕೇರಿ: ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸುಮಾರು 70 ವಿದ್ಯಾರ್ಥಿಗಳ ಶಿಕ್ಷಣ ಈಗ ಅತಂತ್ರವಾಗಿದೆ.
ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಪಂಚಾಯಿತಿಯವರು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರೂ ಶಿಕ್ಷಣ ಇಲಾಖೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ.
ಕೇರಳ ರಾಜ್ಯದ ಗಡಿಯಲ್ಲಿರುವ ಕೊಡಗಿನ ಒಂದು ಪುಟ್ಟ ಗ್ರಾಮ ಕರಿಕೆ. ಗಡಿ ಗ್ರಾಮಕ್ಕೆ ಸುಧಾರಿತ ಆರೋಗ್ಯ ಸೇವೆ ಸೇರಿದಂತೆ ಯಾವುದೇ ಸೂಕ್ತ ಸೌಲಭ್ಯಗಳಿಲ್ಲ. ಈ ಗಡಿ ಗ್ರಾಮದ ನಿವಾಸಿಗಳು ದಿನಸಿ, ಔಷಧಿಗಳು ಮತ್ತು ಆರೋಗ್ಯ ಸೇವೆ ಸೇರಿದಂತೆ ದೈನಂದಿನ ಅಗತ್ಯಗಳಿಗಾಗಿ ಪಾಣತ್ತೂರ್(ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಪಟ್ಟಣ) ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ, ಗಡಿಗ್ರಾಮದ ವಿದ್ಯಾರ್ಥಿಗಳು ಕನ್ನಡ ಮಾತನಾಡುತ್ತಿದ್ದು, ಕರಿಕೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಅದೇನೇ ಇದ್ದರೂ, ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ಕೇರಳದ ಶಾಲೆಗಳಲ್ಲಿ ಓದುವ ಪರಿಸ್ಥಿತಿ ಬರಬಾರದು ಎಂದು ನಿವಾಸಿಗಳು ಹೇಳುತ್ತಿದ್ದಾರೆ.
"ಕರಿಕೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ - ಅವರಲ್ಲಿ ಹೆಚ್ಚಿನವರು ಎಸ್‌ಸಿ-ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ಒಟ್ಟು ಆರು ಜನ ಶಿಕ್ಷಕರ ಅಗತ್ಯವಿದೆ. ಆದರೆ, ಕೇವಲ ನಾಲ್ವರು ಶಿಕ್ಷಕರನ್ನು ನೇಮಿಸಲಾಗಿದೆ. ಇದೀಗ ಮೂವರು ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ವರ್ಗಾವಣೆ ಪಡೆದಿದ್ದಾರೆ. ಈಗ ಉಳಿದ ಓರ್ವ ಶಿಕ್ಷಕಿಯೂ ವರ್ಗಾವಣೆಗೆ ಯತ್ನಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ’ ಎಂದು ಕರಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ಕಾಟೂರು ಅವರು ಹೇಳಿದ್ದಾರೆ.
ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುತ್ತು ಬರಲಿದೆ. ಈ ಶಾಲೆ ಬಂದ್ ಆದರೆ ವಿದ್ಯಾರ್ಥಿಗಳು 25 ಕಿಮೀ ದೂರದಲ್ಲಿರುವ ಸುಳ್ಯಕ್ಕೆ ಅಥವಾ 30 ಕಿಮೀ ದೂರದಲ್ಲಿರುವ ಕೊಡಗಿನ ಭಾಗಮಂಡಲಕ್ಕೆ ಹೋಗಬೇಕಾಗುತ್ತದೆ. ಇದರಿಂದ ಹಲವು ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿಯಬಹುದು ಎಂದು ಕಾಟೂರು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ರಂಗದಾಮಯ್ಯ ಅವರು, ಇಲಾಖೆ ವತಿಯಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಯತ್ನಿಸಲಾಗುವುದು. "ಅತಿಥಿ ಶಿಕ್ಷಕರಿಲ್ಲದಿದ್ದರೆ, ನಾವು ಇತರ ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರನ್ನು ವಾರದಲ್ಲಿ ಮೂರು ದಿನ ಕರಿಕೆ ಶಾಲೆಗೆ ಕಳುಹಿಸುತ್ತೇವೆ" ಎಂದು ಹೇಳಿದ್ದಾರೆ.
ಆದರೆ, ಉಳಿದ ಮೂರು ದಿನಗಳ ತರಗತಿ ಬಗ್ಗೆ ಕೇಳಿದಾಗ, ಸಾಧ್ಯವಾದರೆ ಬೇರೆ ಬೇರೆ ಶಿಕ್ಷಕರನ್ನು ಕಳುಹಿಸಲು ಪ್ರಯತ್ನಿಸುತ್ತೇವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


